ಗದಗ: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನ ಕಾರ್ಯ ಮೂರನೇ ದಿನಕ್ಕೆ ಕಾಲಿಟ್ಟಿದೆ. ಉತ್ಖನನ ಸ್ಥಳಕ್ಕೆ ಪುರಾತತ್ವ ಇಲಾಖೆ ಮೈಸೂರು, ಹಂಪಿ ಹಾಗೂ ಧಾರವಾಡ ವಲಯದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ನಾಗರ ಹೆಡೆ ಕೆತ್ತನೆಯ ಮತ್ತೊಂದು ಅಪರೂಪದ ಶಿಲ್ಪಕಲಾಕೃತಿ ಪತ್ತೆಯಾಗಿದೆ. ಹೌದು ನಿನ್ನೆ ಉತ್ಖನನ ವೇಳೆ ಪತ್ತೆಯಾದ ಶಿವಲಿಂಗ ಮತ್ತು ಪಾನಿ ಪೀಠದ ಶಿಲಾನ್ಯಾಸವನ್ನು ಅಧಿಕಾರಿಗಳು ವೀಕ್ಷಿಸಿದರು. ಇದೇ ವೇಳೆ ಉತ್ಖನನದ ಸಂದರ್ಭದಲ್ಲಿ ನಾಗರ ಹೆಡೆ ಕೆತ್ತನೆಯ ಮತ್ತೊಂದು ಅಪರೂಪದ ಶಿಲ್ಪಕಲಾಕೃತಿ ಪತ್ತೆಯಾಗಿದೆ.
ಈ ಕುರಿತು ಮಾತನಾಡಿದ ಪುರಾತತ್ವ ಇಲಾಖೆ ಮೈಸೂರು ವಲಯ ಆಯುಕ್ತ ಎ. ದೇವರಾಜು, ಉತ್ಖನನ ಕಾರ್ಯ ಪೂರ್ವನಿಗದಿತವಾಗಿದ್ದು, ಮೇ 15ರಂದು ಅನುಮತಿ ದೊರೆತಿತ್ತು. ಜೂನ್ 3ರಂದು ಮುಖ್ಯಮಂತ್ರಿ ಭೂಮಿ ಪೂಜೆ ನೆರವೇರಿಸಿದ್ದರು. ಮಳೆಗಾಲದ ಕಾರಣ ಆ ವೇಳೆ ಉತ್ಖನನ ಕಾರ್ಯ ಆರಂಭವಾಗಿರಲಿಲ್ಲ. ಕಳೆದ ಮೂರು ದಿನಗಳಿಂದ ಉತ್ಖನನ ಕಾರ್ಯ ಆರಂಭಿಸಲಾಗಿದೆ ಎಂದು ತಿಳಿಸಿದರು.
ದೇವಾಲಯ ಹಾಗೂ ಮುಂದಿನ ಕೊಳದ ನಡುವೆ ಸಂಪರ್ಕವಿದ್ದ ಮಾಹಿತಿ ಲಭ್ಯವಾಗಿದೆ. ಇಲ್ಲಿ ಸಾಕಷ್ಟು ಚಿನ್ನ ಸಿಗಬಹುದು ಎಂದು ಕೆಲವರು ಹೇಳುತ್ತಿದ್ದರೂ, ಚಿನ್ನ ಅಥವಾ ಬೆಳ್ಳಿ ಅನ್ವೇಷಣೆ ನಮ್ಮ ಉದ್ದೇಶವಲ್ಲ. ಇತಿಹಾಸದ ಕುರುಹುಗಳ ಅನ್ವೇಷಣೆಯೇ ಮುಖ್ಯ ಎಂದು ಅವರು ಸ್ಪಷ್ಟಪಡಿಸಿದರು. ನಿಧಿ ಸಿಕ್ಕಿರುವುದು ಕೇವಲ ಆಕಸ್ಮಿಕವಾಗಿದ್ದು, ನಿಧಿ ಹುಡುಕಾಟ ನಡೆಯುತ್ತಿಲ್ಲ. ಇದು ಶಿಲ್ಪಕಲೆ ಮತ್ತು ಪುರಾತತ್ವ ಅವಶೇಷಗಳ ಹುಡುಕಾಟವಾಗಿದೆ ಎಂದು ಹೇಳಿದರು.
ಲಕ್ಕುಂಡಿಯಲ್ಲಿ ಹಿಂದೆ ಟಂಕಸಾಲೆ ಇತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಅದಕ್ಕೆ ದಾಖಲೆ ರೂಪದಲ್ಲಿ ಮುತ್ತು, ರತ್ನ, ಹವಳ ಹಾಗೂ ಚಿನ್ನಾಭರಣಗಳು ಪತ್ತೆಯಾಗಿವೆ. ಇದರಿಂದ ಇಲ್ಲಿ ಟಂಕಸಾಲೆ ಇತ್ತು ಎಂಬುದು ನಿರೂಪಣೆಯಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೇನು ಪತ್ತೆಯಾಗಬಹುದು ಎಂಬ ಕುತೂಹಲವಿದೆ ಎಂದು ತಿಳಿಸಿದರು.
ಇಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದ್ದು, ತಾಂತ್ರಿಕ ಸಮಿತಿಯನ್ನು ರಚಿಸಿ ಪತ್ತೆಯಾದ ಅವಶೇಷಗಳ ಕಾಲಘಟ್ಟವನ್ನು ನಿರ್ಧರಿಸಲಾಗುತ್ತದೆ. ಜೊತೆಗೆ ಸಂಬಂಧಿತ ಕುಟುಂಬಗಳಿಗೆ ಪರಿಹಾರ ನಿಗದಿ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಯುಕ್ತ ಎ. ದೇವರಾಜು ತಿಳಿಸಿದ್ದಾರೆ.



