ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದ ಈಗಾಗಲೇ ಘೋಷಿತ 16 ರಾಜ್ಯ ಸಂರಕ್ಷಿತ ಸ್ಮಾರಕಗಳ ಜೊತೆಗೆ, ಇನ್ನೂ 8 ದೇವಸ್ಥಾನ ಹಾಗೂ ಬಾವಿಗಳನ್ನು ಫೆಬ್ರವರಿ ಅಂತ್ಯದೊಳಗೆ ಸಂರಕ್ಷಿತ ಸ್ಮಾರಕಗಳಾಗಿ ಘೋಷಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಭಾನುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಉನ್ನತ ಮಟ್ಟದ ಸಲಹಾ ಸಮಿತಿಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಲಕ್ಕುಂಡಿಯ ಇನ್ನೂ 20 ದೇವಸ್ಥಾನ ಮತ್ತು ಬಾವಿಗಳನ್ನು ರಾಜ್ಯ ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರಿಸುವ ಕುರಿತು ಒಂದು ತಿಂಗಳೊಳಗೆ ಸಮಗ್ರ ಪ್ರಸ್ತಾವನೆ ಸಲ್ಲಿಸುವಂತೆ ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಲಾಗಿದೆ. ಇದರಿಂದ ಲಕ್ಕುಂಡಿಯ ಒಟ್ಟು 44 ತಾಣಗಳು ಸರ್ಕಾರದ ನೇರ ಉಸ್ತುವಾರಿಗೆ ಬರಲಿದ್ದು, ರಕ್ಷಣೆಯೊಂದಿಗೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ ಎಂದರು.
10 ಕೋಟಿ ರೂ. ಅನುದಾನ:
ಲಕ್ಕುಂಡಿಯ ಆಯ್ದ 5 ದೇವಸ್ಥಾನಗಳು ಹಾಗೂ 1 ಪ್ರಾಚೀನ ಬಾವಿಯ ಸಮಗ್ರ ಅಭಿವೃದ್ಧಿಗೆ ಈಗಾಗಲೇ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಫೆಬ್ರವರಿಯಲ್ಲಿ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗುವುದು ಎಂದು ತಿಳಿಸಿದರು. ಮಣ್ಣಿನಡಿಯಲ್ಲಿ ಮರೆಮಾಚಿರುವ ದೇವಸ್ಥಾನಗಳನ್ನು ಗುರುತಿಸಿ ಮಾರ್ಚ್ ಒಳಗೆ ವಿಶೇಷ ಉತ್ಖನನ ಕಾರ್ಯ ನಡೆಸಲಾಗುವುದು. ಇದಕ್ಕೆ ಸ್ಥಳೀಯರ ಸಹಕಾರ ಅಗತ್ಯವಿದ್ದು, ಅಗತ್ಯವಿದ್ದಲ್ಲಿ ಪರಿಹಾರ ನೀಡಿ ಅಥವಾ ಮನವೊಲಿಸಿ ತಾಣಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು ಎಂದು ಹೇಳಿದರು. ಬಯಲು ವಸ್ತು ಸಂಗ್ರಹಾಲಯಕ್ಕೆ 165 ಲಕ್ಷ ರೂ.
ಲಕ್ಕುಂಡಿಯ ಕಲಾ ವೈಭವದ ಅಧ್ಯಯನಕ್ಕಾಗಿ ಬಯಲು ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ 165 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಗಣರಾಜ್ಯೋತ್ಸವದೊಳಗೆ ಜಮೀನು ನೋಂದಣಿ ಪೂರ್ಣಗೊಳಿಸಿ, ಟೆಂಡರ್ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಬಂಗಾರದ ನಿಧಿ ಹಸ್ತಾಂತರಿಸಿದವರಿಗೆ ಸನ್ಮಾನ:
ಇತ್ತೀಚೆಗೆ ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಅವರಿಗೆ ಉದ್ಯೋಗ ಮತ್ತು ಮನೆ ನೀಡಲು ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಂಡಿದೆ. ಸಂಬಂಧಿತ ಆದೇಶ ಪತ್ರಗಳನ್ನು ಗಣರಾಜ್ಯೋತ್ಸವದಂದು ಹಸ್ತಾಂತರಿಸಲಾಗುವುದು. ನಿಧಿಯ ಕಾಲಘಟ್ಟ ನಿರ್ಧಾರಕ್ಕಾಗಿ ತಾಂತ್ರಿಕ ಸಮಿತಿಯನ್ನು ರಚಿಸಿ, ಅದರ ವರದಿ ಆಧರಿಸಿ ಪ್ರೋತ್ಸಾಹ ಧನ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಸಲಹಾ ಸಮಿತಿಯ ಸದಸ್ಯ ಸಿದ್ದು ಪಾಟೀಲ, ಅ ದ ಕಟ್ಟಿಮನಿ, ಶ್ರೀಧರ, ಪುರಾತತ್ವ ಇಲಾಖೆ ಆಯುಕ್ತ ದೇವರಾಜ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ಡಾ. ಶರಣು ಗೊಗೇರಿ, ಲಕ್ಕುಂಡಿ ಗ್ರಾ ಪಂ ಅಧ್ಯಕ್ಷ ಕೆಂಚಪ್ಪ ಪೂಜಾರ, ಅಧಿಕಾರಿಗಳಾದ ಗಂಗಪ್ಪ ಎಂ, ವಸಂತ ಮಡ್ಲೂರ, ಕೊಟ್ರೇಶ್ ವಿಭೂತಿ, ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ತೇಜಶ್ವರ, ಮಲ್ಲಯ್ಯ ಕೆ, ಅಮೀರ್ ನಾಯ್ಕ, ಸೇರಿದಂತೆ ಇತರರು ಇದ್ದರು.



