ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿದರೂ, ಗಿಲ್ಲಿ ನಟ ಕ್ರೇಜ್ ಮಾತ್ರ ಇನ್ನೂ ಜೋರಾಗಿದೆ. ವಿನ್ನರ್ ಆಗಿ ಹೊರಬಂದ ನಂತರ ಗಿಲ್ಲಿ ನಟ ಮಾತನಾಡಿದ ಪ್ರತಿಯೊಂದು ಮಾತು ಅಭಿಮಾನಿಗಳ ಮನಸ್ಸಿಗೆ ನೇರವಾಗಿ ತಾಕುತ್ತಿದೆ.
“ನಿಜ ಹೇಳ್ಬೇಕಂದ್ರೆ… ಇನ್ನೂ ನಂಬೋಕೆ ಆಗ್ತಿಲ್ಲ. ಇದು ನಿಜನಾ, ಸುಳ್ಳಾ ಅನ್ನೋದೇ ಗೊತ್ತಾಗ್ತಿಲ್ಲ. ಪದೇ ಪದೇ ಮೈಕ್ ಇದ್ಯಾ ಅಂತ ನೋಡ್ಕೊಳ್ತಿದ್ದೀನಿ” ಎಂದು ಗಿಲ್ಲಿ ನಟ ಭಾವುಕರಾಗಿ ಹೇಳಿದ್ದಾರೆ.
ತಮಗೆ ದೊರೆತ 50 ಲಕ್ಷ ಬಹುಮಾನ ಕುರಿತು ಮಾತನಾಡಿದ ಅವರು, “ಬಂದಿರೋ ಹಣದಲ್ಲಿ ಯಾವುದಾದ್ರೂ ಜಮೀನು ತಗೋಂಡು ವ್ಯವಸಾಯ ಮಾಡಬೇಕು ಅನ್ನೋ ಆಸೆ ಇದೆ” ಎಂದು ಸರಳ ಕನಸನ್ನು ವ್ಯಕ್ತಪಡಿಸಿದರು.
‘ನಾನ್ ದೊಡ್ಡಮ್ಮ… ದೊಡ್ಡಮ್ಮ ದ್ವಾಸೆ ಕೊಡು…’ ಡೈಲಾಗ್ ಹೇಗೆ ವೈರಲ್ ಆಯ್ತು ಅನ್ನೋದಕ್ಕೂ ಗಿಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. “ಆ ಹಾಡು ನಾನು ಸ್ಕೂಲ್ಗೆ ಹೋಗುವಾಗ ಕಲಿತದ್ದು. ಮನೆಲಿ ಸುಮ್ನೆ ಹೇಳ್ತಿದ್ದೆ. ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತೆ ಅಂತ ಅಂದ್ಕೊಂಡೇ ಇರಲಿಲ್ಲ. ಮಕ್ಕಳಿಗೆ ತುಂಬಾ ಇಷ್ಟ ಆಗಿದೆ ಅನ್ನೋದು ಹೊರಗೆ ಬಂದ್ಮೇಲೆ ಗೊತ್ತಾಯ್ತು” ಎಂದಿದ್ದಾರೆ.
ಕಾವ್ಯಾ ಜೊತೆ ಸಂಬಂಧ, ಮದುವೆ ಗಾಸಿಪ್ ಕುರಿತು ಕ್ಲ್ಯಾರಿಟಿ ಕೊಟ್ಟ ಗಿಲ್ಲಿ, “ನಾವು ಜಂಟಿಯಾಗಿ ಎಂಟ್ರಿ ಕೊಟ್ಟಿದ್ವಿ ಅಷ್ಟೇ. ಮದುವೆ ಮಾತು ಏನೂ ಇಲ್ಲ. ಫೈನಲ್ನಲ್ಲಿ ಆರು ಜನ ಇದ್ದಾಗ ಎಷ್ಟು ಟೆನ್ಷನ್ ಇತ್ತು ಅಂದ್ರೆ ಹೇಳೋಕೂ ಆಗಲ್ಲ. ಯಾರಾದರೂ ನನ್ನ ಪಕ್ಕ ನಿಲ್ಲಬಹುದು ಅನ್ನೋ ಭಾವನೆ ಇತ್ತು, ಆದರೆ ಏನಾಗುತ್ತೆ ಅನ್ನೋದು ಊಹೆ ಮಾಡೋಕೂ ಆಗ್ತಿರಲಿಲ್ಲ” ಎಂದರು.
ಬಿಗ್ ಬಾಸ್ ಮನೆಯಲ್ಲಿ ಚಡ್ಡಿ-ಬನಿಯನ್ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಕಾರಣ ತಿಳಿಸಿದ ಗಿಲ್ಲಿ, “ಶರ್ಟ್-ಪ್ಯಾಂಟ್ ಹಾಕಿಕೊಂಡ್ರೆ ಕಂಫರ್ಟ್ ಇರಲಿಲ್ಲ. ನನಗೆ ಚಡ್ಡಿ-ಬನಿಯನ್ನೇ ನ್ಯಾಚುರಲ್” ಎಂದು ನಗುಚಾಟದೊಂದಿಗೆ ಹೇಳಿದರು.
ಸಿನಿಮಾ ಜೀವನದ ಕುರಿತು ಮಾತನಾಡಿದ ಗಿಲ್ಲಿ, “ಡೆವಿಲ್ ಸಿನಿಮಾದಲ್ಲಿ ನನ್ನ ನೋಡಿ ಜನ ಇಷ್ಟಪಟ್ಟಿದ್ದಾರೆ ಅನ್ನೋದು ಖುಷಿ ಕೊಟ್ಟಿದೆ. ದರ್ಶನ್ ಅಣ್ಣ ಜೊತೆ ಮೊದಲ ಸಿನಿಮಾ ಮಾಡಿದ್ದು ನನ್ನ ಜೀವನದ ದೊಡ್ಡ ಗೌರವ. ಮುಂದೆ ಹೀಗೇ ಸಿನಿಮಾಗಳಲ್ಲಿ ಮುಂದುವರಿಯಬೇಕು” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.



