ಅಸ್ಸಾಂ: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ನಡುವೆ, ಅಸ್ಸಾಂನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.
ಯುಕೆಜಿಯಲ್ಲಿ ಓದುತ್ತಿದ್ದ ಮಗನ ಮಾರ್ಕ್ಸ್ಕಾರ್ಡ್ ಪಡೆಯಲು ಶಾಲೆಗೆ ತೆರಳಿದ್ದ ತಂದೆ, ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ದೀಪಂಕರ್ ಬೋರ್ಡೊಲೊಯ್ (35) ಎಂದು ಗುರುತಿಸಲಾಗಿದೆ. ಅವರು ಅಸ್ಸಾಂನ ಜೋರ್ಹತ್ ಜಿಲ್ಲೆಯ ಸ್ಯಾಮ್ಫೋರ್ಡ್ ಶಾಲೆಗೆ ಜನವರಿ 15ರಂದು ಮಗನ ಫಲಿತಾಂಶದ ಮಾರ್ಕ್ಸ್ಕಾರ್ಡ್ ತರಲು ತೆರಳಿದ್ದರು. ಕೆಲಸಕ್ಕೆ ಒಂದು ದಿನ ರಜೆ ಹಾಕಿ ಶಾಲೆಗೆ ಬಂದಿದ್ದ ಅವರು, ಮಾರ್ಕ್ಸ್ಕಾರ್ಡ್ ಪಡೆದು ಶಾಲೆಯಿಂದ ಹೊರಬರುವಾಗ ಕುಸಿದು ಬಿದ್ದರು.
ಸ್ಥಳದಲ್ಲಿದ್ದ ಶಾಲಾ ಸಿಬ್ಬಂದಿ ಹಾಗೂ ಪೋಷಕರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆಯ ಬಳಿಕ ಶಾಲಾ ಆವರಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ದೀಪಂಕರ್ ಬೋರ್ಡೊಲೊಯ್ ಅವರು ಅಸ್ಸಾಂ ಸರ್ಕಾರದ ಟಿಯೋಕ್ ವಿಭಾಗದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಪತ್ನಿ ಗೃಹಿಣಿ. ಕುಟುಂಬದವರ ಪ್ರಕಾರ, ಅವರಿಗೆ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎನ್ನಲಾಗಿದೆ.



