ಮೈಸೂರು: ಜಿಲ್ಲೆಯ ಹುಣಸೂರಿನಲ್ಲಿ ನಡೆದ ಭಾರೀ ಚಿನ್ನದಂಗಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಐದು ಜನರಿದ್ದ ಕಳ್ಳರ ಗ್ಯಾಂಗ್, ಹುಣಸೂರಿನ ‘ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್’ ಚಿನ್ನದಂಗಡಿಯಲ್ಲಿ ಸುಮಾರು 7 ಕೆಜಿ ಬಂಗಾರ ಹಾಗೂ ಡೈಮಂಡ್ಸ್ನ್ನು ಕೇವಲ ಐದು ನಿಮಿಷಗಳಲ್ಲಿ ದೋಚಿ ಪರಾರಿಯಾಗಿತ್ತು.
ಈ ಪ್ರಕರಣದ ತನಿಖೆಗೆ ಮೈಸೂರು ಜಿಲ್ಲಾ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ಬಿಹಾರ ಮತ್ತು ಕರ್ನಾಟಕ ರಾಜ್ಯಗಳ ಪೊಲೀಸರ ಸಂಯುಕ್ತ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಬಿಹಾರದ ಭಾಗಲ್ಪುರ್ ಜಿಲ್ಲೆಯ ಪಂಕಜ್ ಕುಮಾರ್ ಹಾಗೂ ದರ್ಭಾಂಗ್ ಜಿಲ್ಲೆಯ ಹೃಷಿಕೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಒಂದು ಚಿನ್ನದ ಸರ, ಒಂದು ಉಂಗುರ, ಒಂದು ಲಕ್ಷ ರೂ. ನಗದು, ಚಿನ್ನಾಭರಣ ಸಂಗ್ರಹಿಸುವ ಸ್ಟೋರೇಜ್ ಕೇಸ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಪಂಕಜ್ ಕುಮಾರ್ ಬಿಹಾರ ಪೊಲೀಸರ ಪಟ್ಟಿಯಲ್ಲಿ 16 ವಿವಿಧ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದಾನೆ. ಬಿಹಾರ, ಕರ್ನಾಟಕ, ರಾಜಸ್ಥಾನ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ದರೋಡೆ, ಡಕಾಯಿತಿ ಹಾಗೂ ಕೊಲೆ ಯತ್ನ ಸೇರಿದಂತೆ ಹಲವು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕಾಗಿ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.



