ಬೆಂಗಳೂರು:- ಬೆಂಗಳೂರಿನ ವಿವೇಕನಗರ ಮುಖ್ಯ ರಸ್ತೆಯಲ್ಲಿ ಶಾಲೆಗೆ ಬಿಡಲು ಹೋಗ್ತಿದ್ದಾಗ ಕಾಲೇಜು ಬಸ್ ಡಿಕ್ಕಿಯಾಗಿ ತಾಯಿ, ಮಗ ಸಾವನ್ನಪ್ಪಿರುವ ಘಟನೆ ಜರುಗಿದೆ.
ತಾಯಿ ಸಂಗೀತಾ (37), ಮಗ ಪಾರ್ಥ (8) ಮೃತ ದುರ್ದೈವಿಗಳು. ಇವರು ಆಂಧ್ರ ಮೂಲದವರು. ಸಂಗೀತಾ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡ್ತಿದ್ದರು. ಇಬ್ಬರು ಮಕ್ಕಳಿದ್ದು, ಅದೇ ಶಾಲೆಗೆ ಸೇರಿಸಿದ್ದರು. ಪತಿ ಪ್ರಸಾದ್ ಊರಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇಂದು ಬೆಳಿಗ್ಗೆ 6:30ರ ಸುಮಾರಿಗೆ ಮಗನೊಂದಿಗೆ ಶಾಲೆಗೆ ಕೆಲಸಕ್ಕೆ ತೆರಳ್ತಿದ್ದರು. ಈ ವೇಳೆ ರಸ್ತೆ ದಾಟುವಾಗ ಖಾಸಗಿ ಕಾಲೇಜಿನ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ತಾಯಿ-ಮಗ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅಶೋಕ ನಗರ ಪೊಲೀಸ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬೋರಿಂಗ್ ಆಸ್ಪತ್ರೆಗೆ ಕಳುಹಿಸಿದ್ದಾರೆ.



