ದಾವಣಗೆರೆ: ದಾವಣಗೆರೆಯ ಆನಗೋಡ ಬಳಿ ಇರುವ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳ ಅವಧಿಯಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಸಾವನ್ನಪ್ಪಿವೆ.
ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗದಿಂದ ಜಿಂಕೆಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಜನವರಿ 16ರಂದು ಮೊದಲ ಚುಕ್ಕೆ ಜಿಂಕೆ ಸಾವನ್ನಪ್ಪಿದ್ದು, ಮರುದಿನ ಇನ್ನೆರಡು ಜಿಂಕೆಗಳು ಮೃತಪಟ್ಟಿವೆ. ಇದುವರೆಗೆ ಒಟ್ಟು ನಾಲ್ಕು ಚುಕ್ಕೆ ಜಿಂಕೆಗಳ ಸಾವು ಸಂಭವಿಸಿದೆ. ಘಟನೆಯ ಹಿನ್ನೆಲೆ ಮೃಗಾಲಯದಲ್ಲಿ ಕಟ್ಟುನಿಟ್ಟಿನ ಜೈವಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಉಳಿದ ಪ್ರಾಣಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರ ಪ್ರವೇಶ ಹಾಗೂ ವೀಕ್ಷಣೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ತಿಳಿಸಿದ್ದಾರೆ. ಪ್ರಸ್ತುತ ಮೃಗಾಲಯದಲ್ಲಿ 94 ಹೆಣ್ಣು, 58 ಗಂಡು ಹಾಗೂ 18 ಮರಿಗಳು ಸೇರಿದಂತೆ ಒಟ್ಟು 170 ಚುಕ್ಕೆ ಜಿಂಕೆಗಳು ಇವೆ. ಉಳಿದ ಜಿಂಕೆಗಳ ಆರೋಗ್ಯದ ಮೇಲೆ ನಿಕಟ ನಿಗಾ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



