2026ರ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲಿ ಆಡಲು ಬಾರದಿರುವುದಾಗಿ ಪಟ್ಟು ಹಿಡಿದಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಐಸಿಸಿ ಕಠಿಣ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಪಂದ್ಯ ಆಡದಿದ್ದರೆ, ವಿಶ್ವಕಪ್ ಟೂರ್ನಿಯಿಂದಲೇ ಹೊರಗಿಡಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ನಿಲುವು ಬದಲಿಸಿಕೊಳ್ಳಲು ಜನವರಿ 21 ರವರೆಗೆ ಐಸಿಸಿ ಗಡುವು ನೀಡಿದೆ. ನಿಗದಿತ ಅವಧಿಯೊಳಗೆ ಬಾಂಗ್ಲಾ ಭಾರತಕ್ಕೆ ಬರಲು ಒಪ್ಪದಿದ್ದರೆ, ಪುರುಷರ ಟಿ20 ರ್ಯಾಂಕಿಂಗ್ ಆಧಾರದಲ್ಲಿ ಬೇರೊಂದು ಯುರೋಪಿಯನ್ ತಂಡಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಐಸಿಸಿ ಎಚ್ಚರಿಕೆ ನೀಡಿದೆ.
ಐಪಿಎಲ್‌ನಿಂದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಹೊರಗಿಟ್ಟ ಬಳಿಕ ಬಾಂಗ್ಲಾದೇಶ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಭದ್ರತಾ ಕಾರಣಗಳನ್ನು ಉಲ್ಲೇಖಿಸಿ, ತನ್ನ ಪಾಲಿನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಿಸಿಬಿ ಒತ್ತಾಯಿಸಿದೆ.
ಅದಕ್ಕಾಗಿ ಐರ್ಲೆಂಡ್ ವಿರುದ್ಧದ ಲೀಗ್ ಪಂದ್ಯಗಳ ಸ್ಥಳ ಬದಲಾವಣೆಯನ್ನೂ ಬಾಂಗ್ಲಾದೇಶ ಕೇಳಿಕೊಂಡಿದೆ. ಆದರೆ ಭಾರತದಲ್ಲಿ ಆಡುವ ಇತರ ಯಾವುದೇ ತಂಡಗಳು ಭದ್ರತಾ ವಿಚಾರದಲ್ಲಿ ಯಾವುದೇ ಆತಂಕ ವ್ಯಕ್ತಪಡಿಸಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಬಿಸಿಬಿ ಮತ್ತು ಐಸಿಸಿ ನಡುವಿನ ವಿವಾದ ಈಗ ಮೂರನೇ ವಾರಕ್ಕೆ ತಲುಪಿದೆ. ಐಸಿಸಿ ಟಿ20 ವಿಶ್ವಕಪ್ 2026 ಫೆಬ್ರವರಿ 7 ರಂದು ಪಾಕಿಸ್ತಾನ ಹಾಗೂ ನೆದರ್ಲೆಂಡ್ ನಡುವಿನ ಪಂದ್ಯದಿಂದ ಆರಂಭವಾಗಲಿದೆ. ಬಾಂಗ್ಲಾದೇಶ ನಿರಾಕರಣೆ ಮುಂದುವರಿಸಿದರೆ, ಬೇರೊಂದು ತಂಡಕ್ಕೆ ಅವಕಾಶ ನೀಡುವ ಉದ್ದೇಶದಿಂದ ಜನವರಿ 21 ರವರೆಗೆ ಐಸಿಸಿ ಅಂತಿಮ ಗಡುವು ನೀಡಿದೆ.



