ಬೆಂಗಳೂರು: ಸೇಫ್ ಸಿಟಿ ಯೋಜನೆಯಡಿ ನಗರಾದ್ಯಂತ ತಂತ್ರಜ್ಞಾನ ಆಧಾರಿತ ತ್ವರಿತ ಕಾರ್ಯಾಚರಣೆಗಳನ್ನು ಕೈಗೊಂಡಿರುವ ಬೆಂಗಳೂರು ಪೊಲೀಸರು, ಕಾಣೆಯಾಗಿದ್ದ ಹಾಗೂ ಪೋಷಕರಿಂದ ತಪ್ಪಿಸಿಕೊಂಡಿದ್ದ ಹಲವು ಮಕ್ಕಳನ್ನು ಕೆಲವೇ ನಿಮಿಷಗಳಲ್ಲಿ ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.
ಸೇಫ್ ಸಿಟಿ ಯೋಜನೆ ಹಾಗೂ 112 ತುರ್ತು ಸಹಾಯವಾಣಿ ಮೂಲಕ ಕಾರ್ಯಾಚರಣೆ ನಡೆಸಲಾಗಿದ್ದು, ಪೊಲೀಸ್ ನಿಯಂತ್ರಣ ಕೊಠಡಿ ಮತ್ತು ಜಿಪಿಎಸ್ ಆಧಾರಿತ ಹೊಯ್ಸಳ ಗಸ್ತು ವಾಹನಗಳನ್ನು ತ್ವರಿತವಾಗಿ ನಿಯೋಜಿಸಲು ಸಾಧ್ಯವಾಗಿದೆ ಎಂದು ಬೆಂಗಳೂರು ಪೊಲೀಸ್ ಇಲಾಖೆಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಡಿಸೆಂಬರ್ 27ರಂದು ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನಸಿಕವಾಗಿ ಅಸ್ವಸ್ಥ ಮಹಿಳೆಯೊಬ್ಬರು ಎರಡು ವರ್ಷದ ಮಗುವನ್ನು ಕರೆದೊಯ್ಯಲು ಯತ್ನಿಸಿದ ಘಟನೆ ವರದಿಯಾಗಿತ್ತು. ಇದನ್ನು ಗಮನಿಸಿದ ಸಹಾಯಕ ಉಪನಿರೀಕ್ಷಕರು ತಕ್ಷಣ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಿದ್ದು, ಕೇವಲ ಐದು ನಿಮಿಷಗಳಲ್ಲಿ ಹೊಯ್ಸಳ ಗಸ್ತು ವಾಹನ ಸ್ಥಳಕ್ಕೆ ತಲುಪಿ ಮಗುವನ್ನು ರಕ್ಷಿಸಿ ತಾಯಿಗೆ ಒಪ್ಪಿಸಿದರು.
ಅದೇ ದಿನ ರಾತ್ರಿ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ 16 ವರ್ಷದ ಮಾನಸಿಕ ಸವಾಲುಗಳನ್ನು ಎದುರಿಸುತ್ತಿದ್ದ ಬಾಲಕನನ್ನು ತುರ್ತು ಕರೆ ಬಂದ ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚಿ ತಾಯಿಯೊಂದಿಗೆ ಮರುಸೇರಿಸಲಾಗಿದೆ.
ಜನವರಿ 3ರಂದು ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಹೆಗ್ಗನಹಳ್ಳಿಯ ಸಂಜೀವಿನಿ ನಗರ ಬಳಿ ನಾಲ್ಕು ವರ್ಷದ ಮಗು ರಸ್ತೆ ಬದಿಯಲ್ಲಿ ಒಂಟಿಯಾಗಿ ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರು. 11 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದ ಹೊಯ್ಸಳ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದರು.
ಜನವರಿ 4ರಂದು ಕಾಡುಗೋಡಿ ಠಾಣಾ ವ್ಯಾಪ್ತಿಯ ನಾಗುಂದಳ್ಳಿಯಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಇಬ್ಬರು ಮಕ್ಕಳ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, 17 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದ ಹೊಯ್ಸಳ ಸಿಬ್ಬಂದಿ ಮಕ್ಕಳನ್ನು ರಕ್ಷಿಸಿ ಮನೆಗೆ ತಲುಪಿಸಿದ್ದಾರೆ.
ಜನವರಿ 14ರಂದು ಗಿರಿನಗರ ಠಾಣಾ ವ್ಯಾಪ್ತಿಯ ಹೊಸಕೆರಹಳ್ಳಿ ಫ್ಲೈಓವರ್ ಸಮೀಪ ರಸ್ತೆಯಲ್ಲಿ ಮಗು ಓಡಾಡುತ್ತಿರುವುದು ಕಮ್ಯಾಂಡ್ ಸೆಂಟರ್ ಸಿಬ್ಬಂದಿಯ ಗಮನಕ್ಕೆ ಬಂದಿದೆ. ನಾಲ್ಕು ನಿಮಿಷಗಳೊಳಗೆ ಸ್ಥಳಕ್ಕೆ ತಲುಪಿದ ಪೊಲೀಸರು ಪರಿಶೀಲನೆ ನಡೆಸಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
ಈ ಎಲ್ಲಾ ಪ್ರಕರಣಗಳಲ್ಲಿಯೂ 20 ನಿಮಿಷಗಳೊಳಗೆ ಪೊಲೀಸ್ ಸಿಬ್ಬಂದಿ ಸ್ಪಂದಿಸಿರುವುದು ಗಮನಾರ್ಹ ವಾಗಿದೆ. ಸೇಫ್ ಸಿಟಿ ಯೋಜನೆಯ ತಂತ್ರಜ್ಞಾನಾಧಾರಿತ ಪೊಲೀಸ್ ವ್ಯವಸ್ಥೆಯ ಪರಿಣಾಮಕಾರಿತ್ವಕ್ಕೆ ಇದು ಉತ್ತಮ ಉದಾಹರಣೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



