ಮೈಸೂರು: ನಗರದ ಕೇಂದ್ರ ಬಸ್ ನಿಲ್ದಾಣದ ಸಮೀಪದ ಖಾಸಗಿ ಹೋಟೆಲ್ ಒಂದರಲ್ಲಿ ಆರ್‌ಎಫ್‌ಒ (ರೇಂಜ್ ಫಾರೆಸ್ಟ್ ಆಫೀಸರ್) ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಟಿ. ನರಸೀಪುರದ ಆರ್‌ಎಫ್‌ಒ ಕಾಂತರಾಜ್ ಚೌಹಾಣ್ ಮೃತರಾಗಿರುವುದು ದೃಢಪಟ್ಟಿದೆ.
ಮೈಸೂರು ನಗರದ ಯುವರಾಜ್ ಗೆಲಾಕ್ಸಿ ಹೋಟೆಲ್ ಸಮೀಪ, ಕುಮಾರನ್ ಜ್ಯುವೆಲರ್ಸ್ ಹಿಂಭಾಗದ ಕಾರಿಡಾರ್ನಲ್ಲಿ ಕಾಂತರಾಜ್ ಚೌಹಾಣ್ ಅವರ ಶವ ಪತ್ತೆಯಾಗಿದೆ. ಈ ಘಟನೆ ಅವರ ಸಾವಿನ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಲಷ್ಕರ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಂತರಾಜ್ ಚೌಹಾಣ್ ಕೇವಲ 15 ದಿನಗಳ ಹಿಂದಷ್ಟೇ ಟಿ. ನರಸೀಪುರಕ್ಕೆ ವರ್ಗಾವಣೆಯಾಗಿದ್ದರು. ನಿನ್ನೆ ಮಧ್ಯಾಹ್ನ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ತಮ್ಮ ಸ್ನೇಹಿತ ಮಲ್ಲನಗೌಡ ಪಾಟೀಲ್ ಅವರೊಂದಿಗೆ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದರು ಎಂದು ತಿಳಿದುಬಂದಿದೆ. ಆದರೆ ಅವರು ಏಕಾಏಕಿ ಮೃತಪಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇನ್ನೂ ಆತಂಕಕಾರಿ ಅಂಶವೆಂದರೆ, ಕಾಂತರಾಜ್ ಚೌಹಾಣ್ ಅವರೊಂದಿಗೆ ಇದ್ದ ಸ್ನೇಹಿತ ಮಲ್ಲನಗೌಡ ಪಾಟೀಲ್ ಸದ್ಯ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಮತ್ತಷ್ಟು ತಿರುವು ದೊರೆತಿದ್ದು, ಪೊಲೀಸರು ಆತನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



