ವಿಜಯಸಾಕ್ಷಿ ಸುದ್ದಿ, ಗದಗ: ಮಹಾಯೋಗಿ ವೇಮನರ ತತ್ವ-ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗಿವೆ. ಅವುಗಳನ್ನು ಇನ್ನಷ್ಟು ಪಸರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಶ್ರೀ ಮಹಾಯೋಗಿ ವೇಮನ ಮತ್ತು ಗದಗ ಜಿಲ್ಲಾ ರೆಡ್ಡಿ ಸಮಾಜ ಸಂಘ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನ್ಯಾಯದ ವಿರುದ್ಧ ಹೋರಾಡುವ ಸ್ವಭಾವದ ಸಮಾಜ ನಮ್ಮದು. ಭೂಮಿಯ ಮೇಲೆ ಅಪಾರ ಮೋಹ ಇಟ್ಟುಕೊಂಡು ಪ್ರಾಮಾಣಿಕವಾಗಿ ದುಡಿದು ಬದುಕುವವರು ನಮ್ಮವರು. ಅನೇಕ ಶ್ರೇಷ್ಠ ವ್ಯಕ್ತಿಗಳನ್ನು ಸಮಾಜಕ್ಕೆ ನೀಡಿರುವ ರೆಡ್ಡಿ ಸಮಾಜ ಶ್ರೇಷ್ಠ ಸಮಾಜವಾಗಿದೆ. ಜನರ ಪ್ರೀತಿಗೆ ಪಾತ್ರರಾದ ರೆಡ್ಡಿ ಸಮುದಾಯದವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರಂತಹ ಮಹಾನ್ ವ್ಯಕ್ತಿತ್ವಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.
ಸಾರಸ್ವತ ಲೋಕಕ್ಕೆ ವೇಮನರ ವಿಚಾರಧಾರೆಯನ್ನು ಪರಿಚಯಿಸುವ ಉದ್ದೇಶದಿಂದ ವೇಮನರ ಕುರಿತ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಮುಂದಿನ 15 ದಿನಗಳೊಳಗೆ ರೆಡ್ಡಿ ಸಮಾಜದ ಸಮುದಾಯ ಭವನಕ್ಕೆ ಜಾಗ ದೊರೆಯಲಿದೆ. ಮುಂದಿನ ವರ್ಷ ಅಲ್ಲಿಯೇ ಮಹಾಯೋಗಿ ವೇಮನ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ತಮಗಾಗಿ ಬದುಕದೇ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ನಾವು ಆಚರಿಸುತ್ತೇವೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಮಹಾಯೋಗಿ ವೇಮನರು ಒಬ್ಬರು. ವೇಮನರು ಸಾಕಷ್ಟು ಕವನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅವರ ಕವನಗಳು ಸರಿಯಾಗಿ ದಾಖಲೀಕರಣವಾಗಿರಲಿಲ್ಲ. ಅನೇಕ ಕವನಗಳು ತಾಳೆಗರಿಗಳಲ್ಲಿ ಇದ್ದು, ಅವುಗಳನ್ನು ಸಂರಕ್ಷಿಸಲು ಬ್ರಿಟಿಷ್ ಸರ್ಕಾರವೇ ಮುಂದಾಯಿತು ಎಂದರೆ ವೇಮನರ ಕವಿತೆಗಳ ಶಕ್ತಿ ಎಷ್ಟಿತ್ತು ಎಂಬುದನ್ನು ಅರಿಯಬಹುದು. ಈ ಶತಮಾನ ಜ್ಞಾನದ ಯುಗ, ಪಾಂಡಿತ್ಯದ ಯುಗ. ಸಮಾಜದ ಎಲ್ಲ ಮಕ್ಕಳಿಗೂ ಸಮರ್ಪಕ ಜ್ಞಾನ ಹಾಗೂ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಮಾಜಿ ಸಚಿವ ಬಿ.ಆರ್. ಯಾವಗಲ್ ಮಾತನಾಡಿ, ಮಹಾಯೋಗಿ ವೇಮನ ವಿಚಾರಗಳು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ. ಇಡೀ ಮನುಕುಲಕ್ಕೆ ಸಾರ್ವಕಾಲಿಕವಾಗಿವೆ. ವೇಮನರು ತಮ್ಮ ವಚನಗಳ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಮಹಾಯೋಗಿ ವೇಮನರ ಜಯಂತಿ ಆಚರಣೆಯ ಮೂಲಕ ವೇಮನರ ವಿಚಾರಗಳನ್ನು ಸಮಾಜದ ಒಳಿತಿಗಾಗಿ ಪಸರಿಸಲು ಎಲ್ಲರೂ ಸಂಘಟಿತರಾಗಬೇಕು ಎಂದರು.
ಹುಲಕೋಟಿಯ ಶ್ರೀ ರಾಜರಾಜೇಶ್ವರಿ ವಿದ್ಯಾನಿಕೇತನದ ಅನಿಲ ವೈದ್ಯ ಉಪನ್ಯಾಸ ನೀಡಿ, ವೇಮನರ ವಚನಗಳ ಪೂಜೆಯಾಗಬೇಕು. ಮಾನವ ಮಹಾಮಾನವ ಆಗಬೇಕು. ಪೂಜೆಯೆನ್ನುವುದು ಸಂಸ್ಕಾರವಾಗಬೇಕು. ಸಂಸ್ಕಾರವು ಸಾಕ್ಷಾತ್ಕಾರವಾಗಬೇಕು. ವೇಮನರು ಮೋಹಕ್ಕೆ ಬಿದ್ದು ಅದರಿಂದ ಹೊರಬರುತ್ತಾರೆ. ಮಹಾಯೋಗಿ ವೇಮನರು ತಮ್ಮ ವಚನಗಳಲ್ಲಿ ನಿಜವನ್ನರಿತವನು ನೀತಿವಂತನು ಎಂದು ಹೇಳಿದ್ದಾರೆ. ಅಜ್ಞಾನದಲ್ಲಿರುವ ತನಕ ಸುಜ್ಞಾನ ಸಿಗುವುದಿಲ್ಲ. ಆಸೆಗಳನ್ನು ತ್ಯಜಿಸಿ ಸತ್ಯವನ್ನರಿತು ನಿಜಮಾನವರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು. ವೇಮನರ ಕುರಿತು ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಕೃಷ್ಣಗೌಡ ಪಾಟೀಲ, ಎಚ್.ಎಸ್. ಶಿವನಗೌಡ್ರ, ವಾಸಣ್ಣ ಕುರಡಗಿ, ಶ್ರೀನಿವಾಸ ದ್ಯಾವನಗೌಡ್ರ, ಮುಚ್ಚಂಡಿ, ಆರ್.ಎಸ್. ಪಾಟೀಲ, ಕರಬಸಪ್ಪ ಹಂಚಿನಾಳ, ಲಕ್ಷಣಗೌಡ ಪಾಟೀಲ, ತಮ್ಮನಗೌಡ ಶಿರಿಯಪ್ಪಗೌಡ್ರ, ಶೇಖರಡ್ಡಿ ಗದ್ದಿಕೇರಿ, ಶಿವನಗೌಡ ಹಳ್ಳೂರ, ಜಯಶ್ರೀ ಕೋಲಕಾರ, ರವಿಂದ್ರನಾಥ ಕುಲಕರ್ಣಿ, ಜೆ.ಕೆ. ಜಮಾದಾರ, ಜಿ.ಬಿ. ಆದಾಪೂರ, ಪ್ರೊ. ಕೆ.ಎಚ್. ಬೇಲೂರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಮಲ್ಲಣ್ಣ ಪರಡ್ಡಿ, ಹೇಮರೆಡ್ಡಿ ನೀಲಗುಂದ, ಪ್ರೇಮಕ್ಕ ಮೇಟಿ, ವಿ.ಆರ್. ದೇವರಡ್ಡಿ ಸೇರಿದಂತೆ ಗದಗ ಜಿಲ್ಲಾ ರೆಡ್ಡಿ ಸಮಾಜದ ಪದಾಧಿಕಾರಿಗಳು, ಗಣ್ಯರು, ಹಿರಿಯರು ಹಾಜರಿದ್ದರು.
ರವಿ ಮೂಲಿಮನಿ ಸ್ವಾಗತಿಸಿದರು. ಸುಧಾ ಹುಚ್ಚಣ್ಣವರ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ವಂದಿಸಿದರು.
ಎಲ್ಲ ಜಯಂತಿಗಳು ದೊಡ್ಡ ಪ್ರಮಾಣದಲ್ಲಿ ಹಾಗೂ ಅರ್ಥಪೂರ್ಣವಾಗಿ ಜರುಗಬೇಕು. ಕನ್ನಡ ನಾಡಿಗೆ ಮಹಾಯೋಗಿ ವೇಮನರನ್ನು ಪರಿಚಯಿಸಿದವರು ಎಸ್.ಆರ್. ಪಾಟೀಲರು ಎಂಬುದನ್ನು ನಾವೆಲ್ಲರೂ ಅರಿಯಬೇಕು. ಬಾಯಿಂದ ಬಾಯಿಗೆ ಹರಿದಾಡುತ್ತಿದ್ದ ವೇಮನರ ಸಾಹಿತ್ಯವನ್ನು ಸಿ.ಪಿ. ಬ್ರೌನ್ ಅವರು ಆಂಗ್ಲ ಭಾಷೆಗೆ ಅನುವಾದಿಸಿ ವಿಶ್ವಕ್ಕೆ ಪರಿಚಯಿಸಿದ್ದಾರೆ. ವೇಮನರ 20 ಸಾವಿರಕ್ಕೂ ಅಧಿಕ ಪ್ರತಿಗಳನ್ನು ಮುದ್ರಿಸಿ ಹಂಚಿಕೆ ಮಾಡಲಾಗಿದೆ ಎಂಬುದು ಸಂತಸದ ಸಂಗತಿ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವೇಮನ ಪೀಠ ಸ್ಥಾಪನೆಯಾಗಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ.
ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.



