ಮಡಿಕೇರಿ:-ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾಹಿದ್ ಅಹ್ಮದ್ (47) ಬಂಧಿತ ಆರೋಪಿ. ಈತ ಹುಣಸೂರಿನ ರತ್ನಪುರಿ ನಿವಾಸಿ ಎನ್ನಲಾಗಿದೆ. ಜಾಹಿದ್ ಆಲ್ಟೊ-800 ಕಾರಿನಲ್ಲಿ ಅಕ್ರಮವಾಗಿ ಗೋಮಾಂಸ ತುಂಬಿಸಿಕೊಂಡು ಕಾರಿನಲ್ಲಿ ಗೋಣಿಕೊಪ್ಪಲಿನಿಂದ ವಿರಾಜಪೇಟೆ ಕಡೆಗೆ ಬರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿರಾಜಪೇಟೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ.
ಕಾರು ಪರಿಶೀಲಿಸಿದಾಗ ಕಾರಿನಲ್ಲಿ 150 ಕೆಜಿ ಗೋಮಾಂಸ ಪತ್ತೆಯಾಗಿದ್ದು, ಇದನ್ನ ವಿರಾಜಪೇಟೆ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ತರುತ್ತಿದ್ದ ಎನ್ನಲಾಗಿದೆ. ಈತ ಹುಣಸೂರಿನ ರತ್ನಪುರಿ ಯಿಂದ ಮಾಂಸವನ್ನ ತಂದಿರೋದಾಗಿ ಪೊಲೀಸರಿಗೆ ಹೇಳಿದ್ದಾನೆ.
ಆರೋಪಿಯನ್ನ ಬಂಧಿಸಿ ಪ್ರಕರಣ ದಾಖಲಿಸಿರುವ ಪೊಲೀಸರು, ಗೋಮಾಂಸ ಸಾಗಾಟಕ್ಕೆ ಬಳಸಿದ್ದ ಕಾರನ್ನೂ ಜಪ್ತಿ ಮಾಡಿದ್ದಾರೆ.



