ಪುನೀತ್ ಸಿನಿಮಾದ ಹಾಡು ಹೇಳಿ ಸಂತಾಪ ಸೂಚಿಸಿದ ಪಾಕಿಸ್ತಾನ ಅಭಿಮಾನಿ? ಕಣ್ಣೀರಲ್ಲಿ ಕರುನಾಡು

Vijayasakshi (Gadag News) :

ಯುವರತ್ನನ ಅಂತಿಮ ದರ್ಶನಕ್ಕೆ ಜನಸಾಗರ

-ಮಗುವಂತಿದ್ದ ರಾಜರತ್ನನ ಅಗಲಿಕೆ ಸಹಿಸದೇ ಬಿಕ್ಕಿ ಬಿಕ್ಕಿ ಅತ್ತ ಚಿಣ್ಣರು

ಬಸವರಾಜ ಕರುಗಲ್.
ವಿಜಯಸಾಕ್ಷಿ ವಿಶೇಷ ಸುದ್ದಿ, ಬೆಂಗಳೂರು;

ಅಕ್ಟೋಬರ್ 29ರಂದು ಕರುನಾಡಲ್ಲಿ “ಪುನೀತ್ ಸಾವು” ಎಂಬ ಬರಸಿಡಿಲು ಶುಕ್ರವಾರವೇ ಹಲವು‌ ಜೀವಗಳನ್ನ ಕಸಿದಿತ್ತು. ಆ ಬರಸಿಡಿಲಿನ‌ ಕರಾಳ ಛಾಯೆ ಇಂದೂ ಸಹ ಮುಂದಯವರಿದಿದ್ದು ನಾಡಿನ‌ ವಿವಿಧ ಭಾಗಗಳಲ್ಲಿ ಅಪ್ಪು ಸಾವನ್ನಪ್ಪಿದ ಸುದ್ದಿ ಅರಗಿಸಿಕೊಳ್ಳದ ಹಲವು ಅಭಿಮಾನಿ ದೇವರುಗಳು ಪ್ರಾಣ ತೆತ್ತಿದ್ದಾರೆ.

ಅಗಲಿದ ಅಪ್ಪುವಿನ ಅಂತಿಮ ದರ್ಶನಕ್ಕೆ ಇಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಜನಸಾಗರವೇ ಸೇರಿತ್ತು. ಇನ್ನೆಂದು ಬಾರದ ಮಗುವಿನ ಹೃದಯದ ಪುನೀತ್‌ನನ್ನು ನೆನೆದು ಕೂಗುತ್ತಿದ್ದ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಸ್ಥರಿಗೆ ಮುಂದೇನು? ಎಂಬುದೇ ತೋಚದಂತಾಗಿ ದಿಗ್ಭ್ರಾಂತರಾಗಿದ್ದರು.

ಭಾರತೀಯ ಚಿತ್ರರಂಗದ ದಂಡು
ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆಯಲು ಭಾರತದ ವಿವಿಧ ಚಿತ್ರರಂಗಗಳ ಗಣ್ಯರ ದಂಡು ಹರಿದು ಬಂದಿತ್ತು.

ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ, ಜ್ಯೂನಿಯರ್ ಎನ್‌ಟಿಆರ್, ಶ್ರೀಕಾಂತ್, ಅಲ್ಲು ಅರ್ಜುನ್, ಪ್ರಭುದೇವ ಸೇರಿದಂತೆ ಹಲವು ಸ್ಟಾರ್‌ಗಳು, ರಾಜಕಾರಣಿಗಳು, ಉದ್ಯಮಿಗಳು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಹಾಡಿನ ಮೂಲಕ ಪಾಕ್ ಅಭಿಮಾನಿ ಶ್ರದ್ಧಾಂಜಲಿ?
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿಕೆ ಕರುನಾಡು ಮಾತ್ರವಲ್ಲ, ವಿಶ್ವದ ಹಲವು ರಾಷ್ಟ್ರಗಳಲ್ಲಿ ನೋವನ್ನುಂಟು ಮಾಡಿದೆ. ಜಾಗತಿಕ ಸುದ್ದಿ ವಾಹಿನಿಗಳಲ್ಲೂ ಇವತ್ತು ಪುನೀತ್ ನಿಧನದ ಸುದ್ದಿ ಪ್ರಸಾರವಾಗಿದೆ.

ಪಾಕಿಸ್ತಾನ ಮೂಲದ ಲಾಹೋರ್‌ನ ಪುನೀತ್ ಅಭಿಮಾನಿಯೊಬ್ಬರು ಬೊಂಬೆ ಹೇಳುತೈತೆ ಹಾಗೂ ನಿನ್ನಿಂದಲೇ… ನಿನ್ನಿಂದಲೇ ಹಾಡು ಹಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆದರೆ ಇದು 2018ರ ವಿಡಿಯೊ ಎಂದು ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ-ಧೃತಿ

ಪುನೀತ್ ಅವರ ಮೊದಲ ಮಗಳು ಧೃತಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು ತಂದೆಯ ಸಾವಿನ ವಿಷಯವನ್ನು ತಡವಾಗಿ ತಿಳಿಸಿದ್ದರಿಂದ ಧೃತಿ ವಿಮಾನದ ಮೂಲಕ ಶನಿವಾರ ಸಂಜೆ ಬೆಂಗಳೂರು ತಲುಪಿ ಸದಾಶಿವನಗರದ ಮನೆಗೆ ಹೋಗಿ ಅಪ್ಪನನ್ನ ಹುಡುಕಾಡಿ, ಆನಂತರ ಪಾರ್ಥಿವ ಶರೀರ ಇರುವ ಸ್ಟೇಡಿಯಂಗೆ ಬಂದು ಅಪ್ಪನ ಅಂತಿಮ ದರ್ಶನ ಪಡೆದು ಬಿಕ್ಕಿ‌ಬಿಕ್ಕಿ ಅತ್ತರು. ದೊಡ್ಡಪ್ಪ ಶಿವಣ್ಣ ಧೃತಿಯನ್ನು ಸಂತೈಸಲು ಹರಸಾಹಸ ಪಟ್ಟರು. ತಮ್ಮನ ಅಗಲಿಕೆ ನೆನೆದು ಇಡೀ ದಿನ ಶಿವಣ್ಣ ಸಹ ಕಣ್ಣೀರು ಸುರಿಸಿದರು.

ಪುನೀತ್ ಕಣ್ಮರೆಯ ಕಣ್ಣೀರಧಾರೆ ಅವರ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ರಾಜ್ಯದ ಬಹುತೇಕ ಮನೆಗಳಲ್ಲಿ ಪುನೀತ್ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಾ ವೃದ್ಧರಾದಿಯಾಗಿ ಚಿಣ್ಣರು ಸಹ ಬಿಕ್ಕಳಿಸಿ ಸತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಬರೆದುಕೊಂಡಿದ್ದಾರೆ. ಪುನೀತ್ ಕೇವಲ ಯುವಕರ ಕಣ್ಮಣಿ ಮಾತ್ರವಲ್ಲ, ಪುಟ್ಟ ಕಂದಮ್ಮಗಳ ನೆಚ್ಚಿನ ತಾರೆಯೂ ಆಗಿದ್ದರು ಎನ್ನುವುದಕ್ಕೆ ಇದು ಉತ್ತಮ ನಿದರ್ಶನ.

ಪ್ರಾಣತ್ಯಾಗ ಮಾಡಿದ ಅಭಿಮಾನಿಗಳು
ಪುನೀತ್ ಅಗಲಿಕೆಯನ್ನು ಸಹಿಸಿಕೊಳ್ಳದೇ ಹಲವರು ಆತ್ಮಹತ್ಯೆಗೆ ಯತ್ನಿಸಿದ್ದರು. ಹೊಸಪೇಟೆಯ ಅಭಿಮಾನಿಯೊಬ್ಬ ಕಾಲುವೆಗೆ ಹಾರಿ ಪ್ರಾಣ ತ್ಯಾಗ ಮಾಡಿರುವ ಬಗ್ಗೆ ವರದಿಯಾಗಿದೆ. ಕೊಪ್ಪಳ ಜಿಲ್ಲೆಯ ನಿಂಗಾಪುರದ ಅಭಿಮಾನಿ ಜ್ಞಾನಮೂರ್ತಿ ಪುನೀತ್ ಸಾವಿನ ಸುದ್ದಿ ಕೇಳಿ ಶುಕ್ರವಾರವೇ ಅಸ್ವಸ್ಥರಾಗಿದ್ದರು. ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಜ್ಞಾನಮೂರ್ತಿ ಶನಿವಾರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು.


ಹೆತ್ತವರ ಪಕ್ಕವೇ ಅಂತ್ಯಕ್ರಿಯೆ
ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆ ನಡೆಸುವ ಸಂಬಂಧ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ಅವರ ಸಮಾಧಿ ನಡುವೆ ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆ ನಡೆಸಲು ಅನುವು ಮಾಡಿಕೊಡುವಂತೆ ರಾಜ್ಯ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಪುನೀತ್ ರಾಜಕುಮಾರ್ ಅವರ ಅಪ್ಪ ಅಮ್ಮನ ಬಳಿ ಪುನೀತ್ ರಾಜಕುಮಾರ್ ಅವರು ಮಲಗಿದ್ದಾರೆ.
ಅಂತ್ಯಸಂಸ್ಕಾರಕ್ಕೆ ಬೇಕಾಗುವ ಅಗತ್ಯ ಜಾಗವನ್ನು ಪಡೆದು ಎಲ್ಲ ವ್ಯವಸ್ಥೆ ನೋಡಿಕೊಳ್ಳುವಂತೆ ವಾರ್ತಾ ಇಲಾಖೆಗೆ ಸರ್ಕಾರ ಸೂಚಿಸಿದೆ.

ಸರ್ಕಾರಿ ಗೌರವ:
ಪುನೀತ್ ರಾಜಕುಮಾರ್ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದಲ್ಲಿ ‌ನಡೆಸಲೂ ಕೂಡ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿKannada News Kannada News Today
Leave A Reply

Your email address will not be published.

three × one =