ಗದಗ: ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿರುವ ಮನೆ ನೋಡಿದರೆ ಸಾಮಾನ್ಯ ಮನೆ, ಆದರೆ ಒಳಗೆ ಪ್ರವೇಶಿಸಿದರೆ ಚಾಲುಕ್ಯರ ಕಾಲದ ಪುರಾತನ ದೇವಸ್ಥಾನ ಕಾಣಿಸುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.
ಲಕ್ಕುಂಡಿ ಗ್ರಾಮದ ಚೌಕಿಮಠ ಕುಟುಂಬದ ಮನೆಯ ಸಂಕೀರ್ಣದಲ್ಲಿ ಈಶ್ವರ ಹಾಗೂ ಅರ್ಧನಾರೇಶ್ವರ ದೇವಸ್ಥಾನಗಳು ಇರುವುದನ್ನು ಇತಿಹಾಸಕಾರರು ಗುರುತಿಸಿದ್ದಾರೆ. ಇದು ಚಾಲುಕ್ಯರ ಕಾಲಕ್ಕೆ ಸೇರಿದ ದೇವಸ್ಥಾನ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮನೆಯೊಳಗೆ ಸುಮಾರು ಹತ್ತು ಅಡಿ ಮಟ್ಟಿಗೆ ದೇವಸ್ಥಾನ ಮುಚ್ಚಿಹೋಗಿದ್ದು, ಅದರ ಐತಿಹಾಸಿಕ ಮಹತ್ವ ಇದೀಗ ಸರ್ಕಾರದ ಗಮನ ಸೆಳೆದಿದೆ. ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆದು ಜೀರ್ಣೋದ್ಧಾರ ಮಾಡುವ ಯೋಜನೆ ರೂಪುಗೊಳ್ಳುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚೌಕಿಮಠ ಕುಟುಂಬದ ಶೇಖರಯ್ಯ ಚೌಕಿಮಠ ಅವರು ಪ್ರತಿಕ್ರಿಯಿಸಿ, “ಸರ್ಕಾರ ಸೂಕ್ತ ಪರಿಹಾರ ನೀಡಿದರೆ ದೇವಸ್ಥಾನವನ್ನು ಬಿಟ್ಟು ಕೊಡಲು ನಾವು ಸಿದ್ಧ” ಎಂದು ತಿಳಿಸಿದ್ದಾರೆ.
ಈ ಆವರಣದಲ್ಲಿ ಶರಣಯ್ಯ ಚೌಕಿಮಠ, ಶೇಖರಯ್ಯ ಚೌಕಿಮಠ, ಬಸವ್ವ ಈರಯ್ಯ ಚೌಕಿಮಠ, ಕೊಟ್ರಯ್ಯ ಚೌಕಿಮಠ, ಈರಮ್ಮ ಶಂಕ್ರಯ್ಯ ಚೌಕಿಮಠ ಕುಟುಂಬಗಳು ವಾಸವಿದ್ದು, ಎಲ್ಲರೂ ಬಡ ಕುಟುಂಬಗಳಾಗಿದ್ದಾರೆ. ಸರ್ಕಾರ ಪರಿಹಾರ ನೀಡಿದಲ್ಲಿ ಸಹಕಾರ ನೀಡುವುದಾಗಿ ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.



