ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಹೊಸ ಮಾರ್ಗಸೂಚಿಗಳಂತೆ, ಎರಡನೇ ಪೂರ್ವಸಿದ್ಧತಾ ಪರೀಕ್ಷೆಗಳು ಜನವರಿ 27ರಿಂದ ಫೆಬ್ರವರಿ 2ರವರೆಗೆ ನಡೆಯಲಿದ್ದು, ಪರೀಕ್ಷೆ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ವಿದ್ಯಾರ್ಥಿಗಳು ಬೆಳಿಗ್ಗೆ 9 ಗಂಟೆಯಿಂದಲೇ ಶಾಲೆಗೆ ಹಾಜರಾಗಬೇಕಾಗುತ್ತದೆ. ಪ್ರಶ್ನೆಪತ್ರಿಕೆಗಳನ್ನು ಶಾಲೆಯ ಲಾಗಿನ್ ಮೂಲಕ ಬೆಳಿಗ್ಗೆ 9.30ಕ್ಕೆ ಡೌನ್‌ಲೋಡ್ ಮಾಡಿ, 10 ಗಂಟೆಯೊಳಗೆ ಮುದ್ರಿಸಬೇಕು. ಬೆಳಿಗ್ಗೆ 10.50ಕ್ಕೂ ಮೊದಲು ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಹಾಲ್‌ಗೆ ಕಳುಹಿಸಬಾರದು ಎಂದು ಸೂಚಿಸಲಾಗಿದೆ.
ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಮುಖ್ಯಶಿಕ್ಷಕ, ನೋಡಲ್ ಶಿಕ್ಷಕ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಉಪನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ವಾರ ಗಣಿತ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಶಿವಮೊಗ್ಗ ಮತ್ತು ಕಲಬುರಗಿಯಲ್ಲಿ ಲೀಕ್ ಆಗಿದ್ದು, ಕೆಲವು ಶಾಲೆಗಳೇ ಪ್ರಶ್ನೆಪತ್ರಿಕೆಗಳನ್ನು ಮೂರು ಗಂಟೆಗಳ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಹಂಚಿದ್ದವು. ಇನ್‌ಸ್ಟಾಗ್ರಾಂನಲ್ಲಿ ‘ಡೆಲ್ಟಾ ಹ್ಯಾಕರ್’ ಹೆಸರಿನಲ್ಲಿ ಹಲವು ಖಾತೆಗಳ ಮೂಲಕ ಪ್ರಶ್ನೆಪತ್ರಿಕೆ ಮಾರಾಟ ಯತ್ನ ನಡೆದಿರುವುದು ಕೂಡ ಬೆಳಕಿಗೆ ಬಂದಿದೆ.



