ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ 5ನೇ ದಿನವೂ ಉತ್ಖನನ ಕಾರ್ಯ ತೀವ್ರಗೊಂಡಿದ್ದು, ಇದೀಗ ಒಡೆದ ಪುರಾತನ ಮಡಿಕೆ ಅವಶೇಷ ಪತ್ತೆಯಾಗಿದೆ. ಈ ಮಡಿಕೆ ಹಳೆಯ ಕಾಲದ್ದು ಎನ್ನಲಾಗಿದ್ದು, ಕಾರ್ಮಿಕರು ಅದನ್ನು ಅತ್ಯಂತ ಜಾಗ್ರತೆಯಿಂದ ಸ್ವಚ್ಛಗೊಳಿಸಿ ಹೊರತೆಗೆದಿದ್ದಾರೆ.
ಈ ಮಡಿಕೆ ಧಾನ್ಯ ಸಂಗ್ರಹಕ್ಕೆ ಬಳಸಿದ ಪಾತ್ರೆಯೇ? ಅಥವಾ ಚಿನ್ನ-ಆಭರಣ ಇರಿಸುವುದಕ್ಕೆ ಉಪಯೋಗವಾಗಿತ್ತೇ? ಎಂಬ ಪ್ರಶ್ನೆಗಳು ಇದೀಗ ಕುತೂಹಲ ಹುಟ್ಟುಹಾಕಿವೆ. ಮಡಿಕೆಯ ಒಳಭಾಗದ ಮಣ್ಣಿನ ಪರಿಶೀಲನೆಯೂ ನಡೆಯುತ್ತಿದೆ.
ಇನ್ನೊಂದು ಕಡೆ, ಲಕ್ಕುಂಡಿಯಲ್ಲಿ ಹೊರಗೆ ಮನೆ, ಒಳಗೆ ದೇವಸ್ಥಾನ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಚಾಲುಕ್ಯರ ಕಾಲದ ಪುರಾತನ ಈಶ್ವರ ದೇವಸ್ಥಾನವೊಂದರಲ್ಲಿ ನಾಲ್ಕೈದು ತಲೆಮಾರುಗಳಿಂದ ಐದು ಕುಟುಂಬಗಳು ವಾಸಿಸುತ್ತಿವೆ.
ಸರ್ಕಾರ ದೇವಸ್ಥಾನವನ್ನು ವಶಕ್ಕೆ ಪಡೆದು ಜೀರ್ಣೋದ್ಧಾರ ಮಾಡಲು ಮುಂದಾಗಿದೆ ಎನ್ನಲಾಗಿದ್ದು, ಇದರಿಂದ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. “ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಬಿಟ್ಟು ಹೋಗಲು ಸಿದ್ಧ” ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ಉತ್ಖನನದ ಎರಡನೇ ದಿನವೇ ಗೋಜರವಾಗಿದ್ದ ಶಿವಲಿಂಗದ ಪಾನಿಪೀಠ ಇದೀಗ ಸಂಪೂರ್ಣವಾಗಿ ಹೊರಗೆತ್ತಲಾಗಿದೆ. ಪುರಾತತ್ವ ಇಲಾಖೆಯ ಸಿಬ್ಬಂದಿಗಳು ಪಾನಿಪೀಠವನ್ನು ಬಹಳ ನಾಜೂಕಿನಿಂದ ಎರಡು ಭಾಗಗಳಲ್ಲಿ ಹೊರತೆಗೆದು ದಾಖಲಾತಿ ಕಾರ್ಯ ನಡೆಸಿದ್ದಾರೆ.
ಪತ್ತೆಯಾದ ಪಾನಿಪೀಠವು ಪುರಾತನ ಕಾಲದದ್ದು ಎಂದು ಅಂದಾಜಿಸಲಾಗಿದ್ದು, ಅದರ ಮೇಲ್ಭಾಗದಲ್ಲಿ ಶಿವಲಿಂಗ ಇದ್ದಿರಬಹುದಾದ ಲಕ್ಷಣಗಳು ಕಂಡುಬಂದಿವೆ. ಇದು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ದೃಢಪಡಿಸಿದೆ.
ಇನ್ನೂ ಮುಂಜಾನೆ ವೇಳೆ ಪುರಾತನ ಮಡಿಕೆ ಹಾಗೂ ಕವಡೆಗಳು ಪತ್ತೆಯಾಗಿದ್ದರೆ, ಸಂಜೆ ವೇಳೆಗೆ ಎರಡು ಭಾಗಗಳಲ್ಲಿ ಪಾನಿಪೀಠ ಪತ್ತೆಯಾಗಿದೆ. ಪ್ರತಿಯೊಂದು ಅವಶೇಷವನ್ನು ಪುರಾತತ್ವ ಇಲಾಖೆಯ ಸಿಬ್ಬಂದಿಗಳು ಫೋಟೋಗ್ರಫಿ ಮೂಲಕ ದಾಖಲಿಸಿ, ಪಿನ್-ಟು-ಪಿನ್ ದಾಖಲೆ ಸಂಗ್ರಹಿಸುತ್ತಿದ್ದಾರೆ.



