ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಎಸ್ಐಟಿ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಸೆಪ್ಟೆಂಬರ್ 17ರಂದು ಐದು, 18ರಂದು ಎರಡು — ಒಟ್ಟು ಏಳು ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಅರಣ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವಶೇಷಗಳು ಪತ್ತೆಯಾಗಿದ್ದವು ಎನ್ನಲಾಗಿದೆ.
ಈ ಪ್ರಕರಣದಲ್ಲಿ ಅತ್ಯಂತ ಮಹತ್ವದ ಸುಳಿವು ಹೊರಬಿದ್ದಿದೆ. ಪತ್ತೆಯಾದ ಏಳು ಬುರುಡೆಗಳಲ್ಲಿ ಒಂದನ್ನು ಕೊಡಗು ಮೂಲದ ಯು.ಬಿ. ಅಯ್ಯಪ್ಪ ಅವರಿಗೆ ಸೇರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಅಸ್ಥಿಪಂಜರ ಪತ್ತೆಯಾದ ಸ್ಥಳದಲ್ಲೇ ಹಿರಿಯ ನಾಗರಿಕರ ಗುರುತಿನ ಚೀಟಿ, ತ್ರಿ ಲೆಗ್ ಬ್ಯಾಲೆನ್ಸ್ ವಾಕಿಂಗ್ ಸ್ಟಿಕ್ ಸಿಕ್ಕಿವೆ. ಈ ಗುರುತಿನ ಚೀಟಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ. ಅಯ್ಯಪ್ಪ ಅವರದ್ದಾಗಿತ್ತು.
ಯು.ಬಿ. ಅಯ್ಯಪ್ಪ ಅವರು ಸುಮಾರು ಏಳು ವರ್ಷಗಳ ಹಿಂದೆ ಮೈಸೂರಿಗೆ ಚಿಕಿತ್ಸೆಗೆ ತೆರಳಿದ ನಂತರ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರುದಲ್ಲಿ ಅವರು ವಾಕಿಂಗ್ ಸ್ಟಿಕ್ ಬಳಸುತ್ತಿದ್ದರು ಎಂಬುದೂ ದಾಖಲಾಗಿದೆ.
ಇದೇ ಕಾರಣಕ್ಕೆ ಈ ಅಸ್ಥಿಪಂಜರ ಅಯ್ಯಪ್ಪ ಅವರದ್ದೇ ಇರಬಹುದು ಎಂಬ ಶಂಕೆ ಮತ್ತಷ್ಟು ಬಲವಾಗಿದೆ. ಇದೀಗ ಎಲ್ಲರ ಕಣ್ಣುಗಳು ಎಫ್ಎಸ್ಎಲ್ ವರದಿಯತ್ತ… ಈ ಪ್ರಕರಣ ಯಾವ ದಿಕ್ಕು ತಾಳುತ್ತದೆ ಎಂಬುದು ಈಗ ರಾಜ್ಯದಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ.



