ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸನಾತನ ಹಿಂದೂ ಧರ್ಮ ಅತ್ಯಂತ ಶ್ರೇಷ್ಠವಾದ ಪರಂಪರೆಯನ್ನು ಹೊಂದಿದ್ದು, ನಮ್ಮ ಧರ್ಮದ ಧೀಶಕ್ತಿಯನ್ನರಿತು ನಾನು ಹಿಂದೂ ಎಂಬ ಅಭಿಮಾನ, ಸ್ವಾಭಿಮಾನದಿಂದ ಪ್ರತಿಯೊಬ್ಬರೂ ಬದುಕಬೇಕು ಎಂದು ಗದಗ ಶ್ರೀ ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು ನುಡಿದರು.
ಅವರು ಪಟ್ಟಣದ ಶ್ರೀ ಸೋಮೇಶ್ವರ ತೇರಿನ ಮನೆಯ ಹತ್ತಿರ ನಡೆದ ಬೃಹತ್ ಹಿಂದೂ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭೌದ್ಧಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ ಎಲ್ಲ ಕ್ಷೇತ್ರಗಳಲ್ಲಿ ಶ್ರೀಮಂತಿಕೆ ಹೊಂದಿದ ಹಿಂದೂ ಧರ್ಮ ಜಗತ್ತಿನ ಉಳಿದೆಲ್ಲ ದೇಶಗಳಿಗೆ ಮುಖವಾಣಿಯಾಗಿದೆ. ಹಿಂದೂ ಧರ್ಮ ಅಪರಿಮಿತ, ಸೀಮಾತೀತ, ಶಾಶ್ವತವಾಗಿದೆ. ಹಿಂದೂ ಧರ್ಮ ಸಕಲ ಜೀವರಾಶಿ, ಪ್ರಕೃತಿ ಸೇರಿ ಎಲ್ಲದರಲ್ಲಿ ಶ್ರೇಷ್ಠತೆಯನ್ನೇ ಸಾಧಿಸಿದೆ. ಇಂದು ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಸನಾತನ ಹಿಂದೂ ಧರ್ಮವೇ ಮೂಲಾಧಾರವಾಗಿದೆ. ವಿಜ್ಞಾನ ಹಿಂದೂ ಧರ್ಮದ ತುಣುಕಷ್ಟೇ. ನಮ್ಮ ದೇಶ, ಧರ್ಮ, ಗುರುಪರಂಪರೆಯ ಹಿರಿಮೆ-ಗರಿಮೆಯನ್ನು ಜಗತ್ತಿಗೆ ಸಾರಿದ ವಿವೇಕಾನಂದರನ್ನು ಓದಿದರೆ ನಮ್ಮ ರಕ್ತದ/ಧರ್ಮದ ಶ್ರೇಷ್ಠತೆ ಅರಿವಾಗುತ್ತದೆ.
ಈ ಪುಣ್ಯಭೂಮಿಯಲ್ಲಿ ಸಿಂಹದಂತೆ ಬದುಕಬೇಕಾದ ನಾವೆಲ್ಲ ನರಿ-ಕುರಿಗಳಂತೆ ಬದುಕುತ್ತಿದ್ದೇವೆ. ಕೆಲ ಕಾವಿಧಾರಿಗಳು, ಬುದ್ಧಿಜೀವಿಗಳೆನಿಸಿಕೊಂಡವರು ನಮ್ಮನ್ನು ಮತಿಗೇಡಿಗಳನ್ನಾಗಿಸುತ್ತಿದ್ದಾರೆ. ಜಗತ್ತಿನ ಶ್ರೀಮಂತ ದೇಶಗಳು, ವಿಶ್ವಮಾನ್ಯರೂ ಸಹ ಭಾರತವನ್ನು ಆಧರಿಸುತ್ತಿವೆ. ಹಿಂದೂ ಧರ್ಮದ ಸಾರ ಸಂಗ್ರಹ ಉನ್ನತಮಟ್ಟದ ಜ್ಞಾನ, ಆನಂದ, ಆತ್ಮಸ್ಥೈರ್ಯ ನೀಡುತ್ತದೆ. ಇನ್ನಾದರೂ ಧರ್ಮದ ಶ್ರೇಷ್ಠತೆ, ನಮ್ಮತನ, ಸ್ವರಕ್ಷಣೆಗಾಗಿ ಹೊಸ ಜೀವನದ ಸಂಕಲ್ಪಕ್ಕೆ ದಿಟ್ಟಹೆಜ್ಜೆ ಇಡೋಣ ಎಂದರು.
ಕಾರ್ಯಕ್ರಮದ ದಿಕ್ಸೂಚಿ ನುಡಿಗಳನ್ನಾಡಿದ ಧಾರವಾಡ ವಿಭಾಗ ಸಂಘ ಸಂಚಾಲಕ ಗೋವಿಂದಪ್ಪ ಗೌಡಪ್ಪಗೋಳ, 100 ವರ್ಷಗಳ ಹಿಂದೆ ಹಿಂದೂ ಧರ್ಮ ಸಂಘಟನೆ ಮಾಡುವದೇ ಅಪರಾಧ ಎನ್ನುವ ಭಾವನೆ ಕಾಡುತ್ತಿತ್ತು. ಅಂತಹ ವೇಳೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹರಿಕಾರ ಡಾ. ಕೇಶವ ಬಲಿರಾಂ ಹೆಡಗೆವಾರ ಬಿತ್ತಿದ ಹಿಂದೂ ಧರ್ಮದ ಶ್ರೇಷ್ಠವಾದ ಸಸಿ ಇಂದು ಆಲದ ಮರದಂತೆ ಎಲ್ಲರಿಗೂ ನೆರಳಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ನಾವೆಲ್ಲ ಬಂಧುಗಳೆಂಬ ಭಾವನೆಯೊಂದಿಗೆ ಧರ್ಮದ ಸಂಘಟನೆ-ರಕ್ಷಣೆಯ ಜತೆಗೆ ರಾಷ್ಟ್ರವನ್ನು ಉತ್ತುಂಗಕ್ಕೇರಿಸುವ ಸಂಕಲ್ಪದೊಂದಿಗೆ ಬಾಳಬೇಕು ಎಂದರು.
ಶಾಸಕ ಡಾ.ಚಂದ್ರು ಲಮಾಣಿ, ಸಣ್ಣೀರಪ್ಪ ಹಳ್ಳೆಪ್ಪನವರ, ಎಂ.ಎಸ್. ದೊಡ್ಡಗೌಡ್ರ, ಬಸಣ್ಣ ಬೆಟಗೇರಿ, ಲೋಹಿತ್ ನೆಲವಿಗಿ, ಶಂಕರ ಬ್ಯಾಡಗಿ, ನಿಂಬಣ್ಣ ಮಡಿವಾಳರ, ಮಹದೇವಪ್ಪ ಬೆಳವಿಗಿ ಸೇರಿ ಗಣ್ಯಮಾನ್ಯರು, ಹಿರಿಯರು, ಹಿಂದೂಪರ ಸಂಘಟನೆಗಳವರು ಇದ್ದರು. ಈರಣ್ಣ ಗಾಣಿಗೇರ, ವೈ.ಪಿ. ನೆಗಳೂರ, ಗಂಗಾಧರ ಮೆಣಸಿನಕಾಯಿ, ಷಣ್ಮುಕ ಗಡ್ಡೆಣ್ಣವರ ನಿರೂಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಧ್ಯಾತ್ಮಿಕ ಚಿಂತಕ ಚಂದ್ರಣ್ಣ ಮಹಾಜನಶೆಟ್ಟರ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಹಿಂದೂ ರಾಷ್ಟ್ರ ವಿಶ್ವಮಾನವತೆಯನ್ನು ಸಾರಿದೆ. ಈಗಲೂ ಸಹ ನಮ್ಮೊಳಗೆ ಧರ್ಮದ ವಿಷಬೀಜ ಬಿತ್ತುತ್ತಿದ್ದು ಎಚ್ಚರಿಕೆಯಿಂದ ಕಿತ್ತುಹಾಕಬೇಕಿದೆ. ಹಿಂದೂ ಧರ್ಮ, ಸಂಸ್ಕೃತಿ, ದೇವಾಲಯ, ಶಿಕ್ಷಣ, ಸಂಪತ್ತು, ಶಿಲ್ಪಕಲೆಗಳ ಮೇಲೆ ಎಷ್ಟೇ ಘೋರವಾದ ದಾಳಿಯಾಗಿದ್ದರೂ ಕಾಲಕಾಲಕ್ಕೆ ದೇವಮಾನವರಾಗಿ ಅವತರಿಸಿದ ಮಹಾಪುರುಷರು ಅವೆಲ್ಲವನ್ನೂ ಹಿಮ್ಮೆಟ್ಟಿಸಿದ್ದಾರೆ. ಹಿಂದೂ ಧರ್ಮದ ಬೆಳಕು ವಿಶ್ವಕ್ಕೆಲ್ಲ ಬೆಳಕು ನೀಡುತ್ತಿದೆ ಎಂದರು.



