ರಾಯಚೂರು:- ಜಿಲ್ಲೆಯ ಸಿಂಧನೂರು ತಾಲೂಕಿನ ಕನ್ನಾರಿ ಕ್ರಾಸ್ ಬಳಿ ಲಾರಿ ಮತ್ತು ಎರಡು ಗೂಡ್ಸ್ ವಾಹನ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜರುಗಿದೆ.
ಸಣ್ಣ ಯಲ್ಲಪ್ಪ(45), ಹರಿ(25), ರಂಗನಾಥ(12) ಬಸವರಾಜ್(40) ಹಾಗೂ ಟಾಟಾ ಏಸ್ ವಾಹನದ ಚಾಲಕ ಮೃತರು. ಇವರು ಆಂಧ್ರ ಮೂಲದವರು. ಭೀಕರ ಅಪಘಾತದಲ್ಲಿ ಕೆಲ ಕುರಿಗಳು ಕೂಡ ಸಾವನ್ನಪ್ಪಿವೆ. ಸಿಂಧನೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಟಾಟಾ ಏಸ್ ಮತ್ತು ಬೊಲೆರೊ ಪಿಕಪ್ ವಾಹನದಲ್ಲಿ ಕುರಿಗಳನ್ನು ತುಂಬಿಕೊಂಡು ಒಟ್ಟು ಎಂಟು ಜನರು ಹೊರಟಿದ್ದರು. ಬಳ್ಳಾರಿಯಿಂದ ಸಿಂಧನೂರು ಕಡೆಗೆ ಕುರಿ ತುಂಬಿಕೊಂಡು ಒಂದರ ಹಿಂದೆ ಒಂದರಂತೆ 2 ವಾಹನ ಹೊರಟಿದ್ದವು. ಅತೀ ವೇಗದಲ್ಲಿದ್ದ ಹಿನ್ನೆಲೆ ನಿಯಂತ್ರಣ ತಪ್ಪಿ ಎರಡು ವಾಹನಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ವಾಹನದಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿದ್ದ ಮೂವರನ್ನು ಸ್ಥಳೀಯ ಸಿಂಧನೂರು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.



