ರಾಮನಗರ:- ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಮಾಗಡಿ ತಾಲೂಕಿನ ವಾಜರಹಳ್ಳಿ ಗ್ರಾಮದಲ್ಲಿ ಘನಘೋರ ಕೃತ್ಯ ಬೆಳಕಿಗೆ ಬಂದಿದೆ.
ತಮ್ಮ ಸ್ವಾರ್ಥಕ್ಕೆ ಸ್ನೇಹಿತನನ್ನು ತೆಂಗಿನ ಮರ ಹತ್ತಿಸಿ ಆತ ಬಿದ್ದು ಬೆನ್ನು ಮೂಳೆಗೆ ಏಟು ಮಾಡಿಕೊಂಡಾಗ ಚಿಕಿತ್ಸೆಗೆ ಹತ್ತಾರು ಲಕ್ಷ ರೂ. ಖರ್ಚಾಗುತ್ತದೆಂದು ಸ್ನೇಹಿತರೇ ಆತನನ್ನು ಕೊಲೆ ಮಾಡಿದ್ದಾರೆ. ಕೊಲೆಯಾದ ಯುವಕನನ್ನು ವಿನೋದ್ ಕುಮಾರ್ (26) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಸುದೀಪ್ ಮತ್ತು ಪ್ರಜ್ವಲ್ ಎನ್ನಲಾಗಿದೆ. ಮೂವರೂ ಮಾಗಡಿ ತಾಲೂಕಿನ ಕಲ್ಯಾಣಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ಜನವರಿ 1ರಂದು ಹೊಸವರ್ಷ ಆಚರಣೆಗಾಗಿ ಐವರು ಸ್ನೇಹಿತರು ಒಟ್ಟಾಗಿ ಪಾರ್ಟಿಗೆ ತೆರಳಿದ್ದರು. ಈ ವೇಳೆ ಮದ್ಯಕ್ಕೆ ಎಳನೀರು ಬೆರೆಸಲು ತೀರ್ಮಾನಿಸಿದ ಅವರು, ವಿನೋದ್ ಕುಮಾರ್ನನ್ನು ತೆಂಗಿನ ಮರ ಹತ್ತುವಂತೆ ಮಾಡಿದ್ದರು ಎನ್ನಲಾಗಿದೆ.
ಆ ಸಂದರ್ಭದಲ್ಲಿ ವಿನೋದ್ ಕುಮಾರ್ ಮರದಿಂದ ಕೆಳಗೆ ಬಿದ್ದಿದ್ದ. ಪರಿಣಾಮವಾಗಿ ಆತನ ಬೆನ್ನುಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗೆ ಹತ್ತಾರು ಲಕ್ಷ ರೂಪಾಯಿ ಖರ್ಚಾಗಬಹುದು ಎಂಬ ಆತಂಕದಿಂದ ಆರೋಪಿಗಳು ಭೀತಿಗೊಂಡಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ವಿನೋದ್ನನ್ನು ಮನೆಗೆ ಬಿಡುತ್ತೇವೆ ಎಂದು ನಂಬಿಸಿ, ಮಾರ್ಗಮಧ್ಯೆ ವಾಜರಹಳ್ಳಿ ಸಮೀಪದ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾರೆ ಎಂಬುದು ಇದೀಗ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ವಿನೋದ್ ಕುಮಾರ್ ನಾಪತ್ತೆಯಾಗಿರುವ ಬಗ್ಗೆ ಅವರ ಪೋಷಕರು ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೂಕ್ಷ್ಮವಾಗಿ ತನಿಖೆ ನಡೆಸಿದ್ದು, ಸ್ನೇಹಿತರಿಂದಲೇ ಕೊಲೆಯಾಗಿರುವ ರಹಸ್ಯ ಬಯಲಾಗಿದೆ. ಇದೀಗ ಸುದೀಪ್ ಮತ್ತು ಪ್ರಜ್ವಲ್ನನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.



