ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಶುರುವಾದ ಏಕಪಕ್ಷೀಯ ಪ್ರೀತಿಯೊಂದು ಮಹಿಳಾ ಫಿಟ್ನೆಸ್ ಇನ್‌ಫ್ಲೂಯೆನ್ಸರ್‌ಗೆ ಭಾರೀ ಕಿರುಕುಳವಾಗಿ ಪರಿಣಮಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಸಂದೇಶ ಕಳುಹಿಸಿ, ನಿರಂತರವಾಗಿ ಹಿಂಸಿಸುತ್ತಿದ್ದ ಆರೋಪಿಯೊಬ್ಬ ಯುವತಿಯನ್ನು ಹುಡುಕಿಕೊಂಡು ಹರಿಯಾಣದಿಂದ ಕರ್ನಾಟಕಕ್ಕೆ ಬಂದಿದ್ದು, ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹರಿಯಾಣ ಮೂಲದ ಸುಧೀರ್ ಕುಮಾರ್ ಬಂಧಿತ ಆರೋಪಿ. ಸಂತ್ರಸ್ತ ಯುವತಿ ಬೆಂಗಳೂರಿನಲ್ಲಿ ಲೇಡಿ ಫಿಟ್ನೆಸ್ ಟ್ರೈನರ್ ಹಾಗೂ ನ್ಯೂಟ್ರಿಷನಿಸ್ಟ್ ಇನ್‌ಫ್ಲೂಯೆನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇನ್‌ಸ್ಟಾಗ್ರಾಂನಲ್ಲಿ ಆಕೆಯ ವಿಡಿಯೋ ಮತ್ತು ಪೋಸ್ಟ್‌ಗಳನ್ನು ನೋಡಿ ಆರೋಪಿಯು ಸಂಪರ್ಕಿಸಿದ್ದಾನೆ.
ಆರಂಭದಲ್ಲಿ ಇನ್‌ಸ್ಟಾಗ್ರಾಂ ಮೂಲಕ ಲೈಂಗಿಕವಾಗಿ ಪ್ರಚೋದಿಸುವ ರೀತಿಯಲ್ಲಿ ಸಂದೇಶ ಕಳುಹಿಸಿದ್ದ ಆರೋಪಿ, ಬಳಿಕ ಯುವತಿಯ ವಾಟ್ಸಪ್ ನಂಬರ್ ಪಡೆದು ಅಶ್ಲೀಲ ಸಂದೇಶಗಳ ಮೂಲಕ ಕಿರುಕುಳ ನೀಡುತ್ತಿದ್ದ. ದಿನಗಳು ಕಳೆದಂತೆ ಕಾಟ ಮಿತಿಮೀರಿದ್ದು, ಯುವತಿಯನ್ನು ಬೆಂಬಿಡದೇ ಹಿಂಬಾಲಿಸಲು ಆರಂಭಿಸಿದ್ದಾನೆ. ಇಷ್ಟಕ್ಕೂ ತೃಪ್ತಿಯಾಗದ ಆರೋಪಿ, ಯುವತಿಯನ್ನು ನೇರವಾಗಿ ಭೇಟಿಯಾಗಲು ಹರಿಯಾಣದಿಂದ ಬೆಂಗಳೂರಿಗೆ ಬಂದಿದ್ದ. ನಗರದಲ್ಲಿ ಆಕೆ ಕೆಲಸ ಮಾಡುತ್ತಿದ್ದ ಜಿಮ್‌ಗೆ ತೆರಳಿ ಸಹೋದ್ಯೋಗಿಗಳ ಬಳಿ ವಿಚಾರಿಸಿದ ವಿಷಯ ತಿಳಿದ ಕೂಡಲೇ ಆತಂಕಗೊಂಡ ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ.
ಯುವತಿಯ ದೂರಿನ ಆಧಾರದ ಮೇಲೆ ದಕ್ಷಿಣ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಕಿರುಕುಳ ಪ್ರಕರಣಗಳಿಗೆ ಇದು ಮತ್ತೊಂದು ಎಚ್ಚರಿಕೆಯ ಘಟನೆ ಆಗಿದೆ.



