ಭದ್ರಾವತಿ: ನಗರದ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂತನಗುಡಿ ಪ್ರದೇಶದಲ್ಲಿ ವೃದ್ಧ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ವಿಐಎಸ್ಎಲ್ ನಿವೃತ್ತ ಉದ್ಯೋಗಿ ಚಂದ್ರಪ್ಪ (75) ಹಾಗೂ ಅವರ ಪತ್ನಿ ಜಯಮ್ಮ (65) ಮೃತರು. ಮೃತದೇಹಗಳು ಮನೆಯಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ಪತ್ತೆಯಾಗಿದ್ದು, ದೇಹಗಳ ಮೇಲೆ ಯಾವುದೇ ಗಾಯಗಳು ಅಥವಾ ಹಲ್ಲೆ ನಡೆಸಿದ ಸ್ಪಷ್ಟ ಗುರುತುಗಳು ಕಂಡುಬಂದಿಲ್ಲ. ದಂಪತಿ ಮನೆಯಲ್ಲಿ ಇಬ್ಬರೇ ವಾಸವಾಗಿದ್ದು, ಅವರಿಗೆ ಮೂವರು ಪುತ್ರರಿದ್ದಾರೆ. ಆದರೆ ಅವರು ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿ ಚಿನ್ನಾಭರಣಗಳು ಕಾಣೆಯಾಗಿರುವ ಮಾಹಿತಿ ಲಭ್ಯವಾಗಿದ್ದು, ವೃದ್ಧ ದಂಪತಿಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಸಾಧ್ಯತೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಥೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ವರದಿ ನಿರೀಕ್ಷಿಸಲಾಗುತ್ತಿದೆ.
ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



