ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪೌರಾಯುಕ್ತರಿಗೆ ಅಸಭ್ಯವಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗ ಒಂದು ವಾರ ಕಳೆದರೂ ಬಂಧನವಾಗದಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಘಟನೆ ನಡೆದ ದಿನದಿಂದಲೇ ರಾಜೀವ್ ಗೌಡ ಭೂಗತವಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹೆಚ್ಚಾಗಿದೆ.
“ರಾಜೀವ್ ಗೌಡ ಬೆನ್ನಿಗೆ ಪ್ರಭಾವಿ ನಾಯಕರು ನಿಂತಿದ್ದಾರೆ” ಎಂದು ಬಿಜೆಪಿ–ಜೆಡಿಎಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಪ್ರಕರಣವು ಕೇವಲ ಕ್ರಿಮಿನಲ್ ವಿಚಾರವಾಗಿರದೆ, ರಾಜಕೀಯ ರಕ್ಷಣೆ ಆರೋಪಕ್ಕೆ ತಿರುಗಿದೆ.
ಸರ್ಕಾರಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದಂತಹ ಗಂಭೀರ ಪ್ರಕರಣದಲ್ಲಿ, ದಿನಗಳಾದರೂ ಬಂಧನವಾಗದಿರುವುದು ಜನಸಾಮಾನ್ಯರಲ್ಲಿ ‘ಉಳ್ಳವರಿಗೆ ಒಂದು ನ್ಯಾಯ, ಬಡವರಿಗೆ ಮತ್ತೊಂದು ನ್ಯಾಯ’ ಎಂಬ ಭಾವನೆಗೆ ಕಾರಣವಾಗಿದೆ.
ರಾಜೀವ್ ಗೌಡ ಎಫ್ಐಆರ್ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ, ಬಂಧನಕ್ಕೆ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್, “ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ” ಎಂದು ಹೇಳಿರುವುದೂ ಮಹತ್ವ ಪಡೆದಿದೆ.
ಇನ್ನೊಂದೆಡೆ, ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ, ರಾಜೀವ್ ಗೌಡ ವಿರುದ್ಧ 16ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಸ್ಪಷ್ಟಪಡಿಸಿದ್ದು, ಅವರನ್ನು ‘ನಟೋರಿಯಸ್ ಕ್ರಿಮಿನಲ್’ ಎಂದು ವಿವರಿಸಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧೆಡೆ ವಿಶೇಷ ತಂಡಗಳ ಮೂಲಕ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



