ಕಲಬುರಗಿ: ನಗರ ಮತ್ತೊಂದು ಭೀಕರ ಕೊಲೆಗೆ ಸಾಕ್ಷಿಯಾಗಿದೆ. ನಗರದ ಲಾಡ್ಜ್ ಒಂದರ ಹಿಂಭಾಗದ ಪಾಳುಬಿದ್ದ ಪಾರ್ಕ್‌ನಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮೃತ ಯುವಕನನ್ನು ಸಯ್ಯದ್ ಮೆಹಬೂಬ್ ಅಲಿಯಾಸ್ ಬಾಡಿ (21) ಎಂದು ಗುರುತಿಸಲಾಗಿದೆ. ತಡರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫಾರೆನ್ಸಿಕ್ ತಜ್ಞರು ಹಾಗೂ ಶ್ವಾನ ದಳದಿಂದಲೂ ತನಿಖೆ ಮುಂದುವರಿದಿದೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಮೆಹಬೂಬ್ ಕೆಲ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಈ ಹಿನ್ನೆಲೆ ಹಳೆಯ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇನ್ನು ಮಗನ ಸಾವಿನ ಸುದ್ದಿ ಕೇಳಿ ಮೆಹಬೂಬ್‌ನ ತಂದೆ ಭಾವೋದ್ರಿಕ್ತರಾಗಿದ್ದು,
“ಅವನು ಮನೆಗೆ ಬರ್ತಿರಲಿಲ್ಲ. ಯಾವಾಗಲೂ ಹೊರಗಡೆಯೇ ಇರುತ್ತಿದ್ದ. ಈಗ ಮಗನನ್ನೇ ಕಳೆದುಕೊಂಡೆ” ಎಂದು ಕಣ್ಣೀರಿಟ್ಟಿದ್ದಾರೆ.
ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳ ಮೂಲಕ ಹುಡುಕಾಟ ತೀವ್ರಗೊಳಿಸಲಾಗಿದೆ.



