ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಚಿರತೆ ಉಪಟಳ ಮತ್ತೊಮ್ಮೆ ಆತಂಕ ಮೂಡಿಸಿದೆ. ಪಾದಯಾತ್ರೆ ಮೂಲಕ ಬೆಟ್ಟಕ್ಕೆ ತೆರಳುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ ನಡೆಸಿದ್ದು, ಯುವಕ ಸಾವನ್ನಪ್ಪಿದ ಘಟನೆ ಬುಧವಾರ ಮುಂಜಾನೆ ನಡೆದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಶವ ಪತ್ತೆಯಾಗಿದೆ.
ಮಂಡ್ಯ ಜಿಲ್ಲೆಯ ಚಿರನಹಳ್ಳಿ ಗ್ರಾಮದ ಪ್ರವೀಣ್ (30) ಮೃತ ಪಾದಯಾತ್ರಿಕ. ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಗಳಿಂದ ನೂರಾರು ಭಕ್ತರು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಮಂಗಳವಾರ ರಾತ್ರಿ ತಾಳುಬೆಟ್ಟದಲ್ಲಿ ವಿಶ್ರಾಂತಿ ಪಡೆದ ತಂಡ, ಬುಧವಾರ ಬೆಳಗ್ಗೆ ಮುಂದಿನ ಹಂತದ ಯಾತ್ರೆ ಆರಂಭಿಸಿತ್ತು.
ಈ ವೇಳೆ ರಂಗಸ್ವಾಮಿ ಒಡ್ಡಿನ ಸಮೀಪದ ಪಾದಯಾತ್ರಾ ಮಾರ್ಗದಲ್ಲಿ ಚಿರತೆಯೊಂದು ಏಕಾಏಕಿ ದಾಳಿ ನಡೆಸಿ ಪ್ರವೀಣ್ ಅವರನ್ನು ಅರಣ್ಯದೊಳಗೆ ಎಳೆದೊಯ್ದಿದೆ. ಜೊತೆಯಲ್ಲಿದ್ದ ಐವರು ಸ್ನೇಹಿತರು ಕಿರುಚಾಡಿ ಚಿರತೆಯನ್ನು ಓಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ ಎಂದು ಹೇಳಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಮಲೆಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಳಿಕ ಯುವಕನ ಶವವನ್ನು ಪತ್ತೆ ಹಚ್ಚಲಾಗಿದೆ.
ಈ ಘಟನೆಯು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಚಿರತೆ ದೃಶ್ಯಗಳಿಗೆ ಮತ್ತಷ್ಟು ಗಂಭೀರತೆ ತಂದಿದೆ. ಈ ಹಿಂದೆ ಸಹ ಚೆನ್ನಮಲ್ಲಿಪುರದಲ್ಲಿ ಚಿರತೆ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅರಣ್ಯ ಪ್ರದೇಶಗಳ ಸುತ್ತಮುತ್ತ ಚಿರತೆ ಉಪಟಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಪಾದಯಾತ್ರಿಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.



