ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣದ ಹಿಂಭಾಗದಲ್ಲಿ ಕಳೆದೊಂದು ತಿಂಗಳಿಂದ ಸಂಚರಿಸುತ್ತಿರುವ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಇನ್ನೂ ಫಲಿತಾಂಶ ನೀಡಿಲ್ಲ. ಕಳೆದ ಭಾನುವಾರ ಸಂಜೆ ಆರಂಭಗೊಂಡು ಸೋಮವಾರ ಬೆಳಗಿನ ಜಾವದವರೆಗೆ ನಡೆದ ತೀವ್ರ ಕಾರ್ಯಾಚರಣೆಯ ವೇಳೆ ಥರ್ಮಲ್ ಡ್ರೋನ್ ಕ್ಯಾಮರಾದಲ್ಲಿ ಒಂದು ಬಾರಿ ಚಿರತೆ ಕಾಣಿಸಿಕೊಂಡರೂ, ನಂತರ ಅದು ಮತ್ತೆ ಮರೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 17ರಂದು ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡ ಬಳಿಕ ಈ ಪ್ರದೇಶದಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ. ಚಿರತೆ ಸೆರೆಗೆ ಮೂರು ಕಡೆಗಳಲ್ಲಿ ಬೋನ್ ಅಳವಡಿಸಲಾಗಿದ್ದು, 11 ಟ್ರ್ಯಾಪ್ ಕ್ಯಾಮರಾಗಳನ್ನು ಸ್ಥಾಪಿಸಲಾಗಿದೆ. ಆದರೂ ಚಿರತೆ ಸೆರೆಗೆ ಸಿಕ್ಕಿಲ್ಲ ಎಂಬುದು ಅರಣ್ಯ ಇಲಾಖೆಗೆ ಸವಾಲಾಗಿದೆ.
ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಲು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಥರ್ಮಲ್ ಡ್ರೋನ್ ಕ್ಯಾಮರಾಗಳು ಹಾಗೂ ತಜ್ಞರ ತಂಡವನ್ನು ಕರೆಸಲಾಗಿದೆ. ಮೈಸೂರಿನಿಂದ ಚಿರತೆ ಸೆರೆ ಹಿಡಿಯುವ ವಿಶೇಷ ಕಾರ್ಯಪಡೆ, ಗದಗ ಜಿಲ್ಲೆಯ ಬಿಂಕದಕಟ್ಟೆ ಪ್ರಾಣಿ ಸಂಗ್ರಹಾಲಯದ ಅರವಳಿಕೆ ತಜ್ಞರು ಹಾಗೂ ಧಾರವಾಡ ಪಶು ವೈದ್ಯಕೀಯ ಇಲಾಖೆಯ ತಜ್ಞರು ಕೂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ವಿಮಾನ ನಿಲ್ದಾಣದ ಸುತ್ತಮುತ್ತ ಸುಮಾರು 150 ಎಕರೆಗೂ ಅಧಿಕ ಪ್ರದೇಶವು ಪೊದೆ, ಮರಗಳಿಂದ ಆವೃತವಾಗಿದ್ದು, ನವಿಲು, ಮುಳ್ಳುಹಂದಿ, ಮೊಲಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಚಿರತೆಗೆ ಆಹಾರ ಸುಲಭವಾಗಿ ಲಭ್ಯವಾಗುತ್ತಿದೆ. ಈ ಕಾರಣದಿಂದ ಚಿರತೆ ಇದೇ ಪ್ರದೇಶದಲ್ಲೇ ಬೀಡುಬಿಟ್ಟಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಭಾನುವಾರ ಸಂಜೆಯಿಂದಲೇ ಕಾರ್ಯಾಚರಣೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹುಬ್ಬಳ್ಳಿ ವಲಯ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ ತಿಳಿಸಿದ್ದಾರೆ.



