ಚಿಕ್ಕಮಗಳೂರು: ಒಬ್ಬ ತಾಯಿಯ ಕೈಗಳಲ್ಲಿ ಆರಂಭವಾಗಬೇಕಿದ್ದ ಜೀವಯಾತ್ರೆ, ಹುಟ್ಟಿದ ಕ್ಷಣದಲ್ಲೇ ಅಂತ್ಯಗೊಂಡ ಹೃದಯವಿದ್ರಾವಕ ಘಟನೆ ಲಕ್ಕವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮದುವೆಗೆ ಮುಂಚೆಯೇ ಗರ್ಭಿಣಿಯಾಗಿದ್ದ ಸ್ಟಾಫ್ ನರ್ಸ್ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿ, ಕುಟುಂಬದವರ ಸಹಾಯದಿಂದ ಮನೆಯಲ್ಲೇ ಹೆರಿಗೆ ಮಾಡಿಕೊಂಡಿದ್ದಾಳೆ. ತಂದೆ, ತಾಯಿ, ಅಜ್ಜಿ ಹಾಗೂ ಇನ್ನೂ ಮೂವರು ಮಹಿಳೆಯರ ಸಹಕಾರದಲ್ಲಿ ಹೆರಿಗೆ ನಡೆದಿದ್ದು, ಗಂಡು ಮಗು ಜನಿಸುತ್ತಿದ್ದಂತೆಯೇ ಕುಟುಂಬದ ಸದಸ್ಯರೇ ಶಿಶುವನ್ನು ಕತ್ತು ಹಿಸುಕಿ ಕೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಿಶುವಿನ ಮೃತದೇಹವನ್ನು ತಿಪ್ಪೆಯಲ್ಲಿ ಹೂತು ಪ್ರಕರಣವನ್ನು ಮರೆಮಾಚಲು ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ. ಸುಮಾರು 15 ದಿನಗಳ ಬಳಿಕ ಈ ಘಟನೆ ಪಕ್ಕದ ಮನೆಯ ಯುವಕನಿಂದ ಬೆಳಕಿಗೆ ಬಂದಿದೆ.
ಈ ಪ್ರಕರಣ ಇದೀಗ ಸಮುದಾಯದಲ್ಲಿ ಭಾರೀ ಆಘಾತ ಉಂಟುಮಾಡಿದ್ದು, ಲಕ್ಕವಳ್ಳಿ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿ, ಎಲ್ಲ ಆರೋಪಿಗಳ ಪಾತ್ರದ ಕುರಿತು ಗಂಭೀರ ತನಿಖೆ ನಡೆಸುತ್ತಿದ್ದಾರೆ.



