ವಿಜಯಸಾಕ್ಷಿ ಸುದ್ದಿ, ಗದಗ: ನಕಲಿ ದಾಖಲೆ ಸೃಷ್ಟಿಸಿ ರಾಚೋಟೇಶ್ವರ ನಗರದ ನಿವಾಸಿಗಳಿಗೆ ತೊಂದರೆ ನೀಡುತ್ತ ಸರ್ಕಾರಿ ಕಾಮಗಾರಿಗಳಿಗೆ ವಿನಾಕಾರಣ ಅಡ್ಡಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಚೋಟೇಶ್ವರ ನಗರದ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಚೋಟೇಶ್ವರ ನಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷರಾದ ರವಿ ಗುಂಜೀಕರ ಮಾತನಾಡಿ, ಲೇಔಟ್ ಮಾಲಿಕರು ಎಂದು ಹೇಳಿಕೊಂಡು ಒಟ್ಟು ಮೊಕ್ತಿಯಾರ್ ಪತ್ರ ಹೊಂದಿದ್ದೇವೆ ಎಂದು ಅಬ್ರಾರ್ ಮಹ್ಮದ ಅಲಿ ಬಿಜಾಪೂರ, ಶಾರುಖ್ ಫರಹಾದ್ ಬಿಜಾಪೂರ, ಸುಹೇಲ್ ಇಮಾಮಸಾಬ ಬಿಜಾಪೂರ ಹಾಗೂ ಉಮರ್ ಫಾರುಖ್ ಸಿರಾಜ್ ಅಹ್ಮದ್ ಬಿಜಾಪೂರ ಎನ್ನುವ ವ್ಯಕ್ತಿಗಳು ಪದೇ ಪದೇ ರಾಚೋಟೇಶ್ವರ ನಗರದ ಉದ್ಯಾನವನಕ್ಕೆ ಬಂದು ಈ ಉದ್ಯಾನವನದ ಸ್ಥಳದಲ್ಲಿ ತಮ್ಮ ನಿವೇಶನಗಳು ಇವೆ ಎಂದು ಸುಳ್ಳು ಹೇಳಿ ಶುದ್ಧ ನೀರಿನ ಘಟಕದ ಸರ್ಕಾರಿ ಕಾಮಗಾರಿ ನಡೆಸಲು ತೊಂದರೆ ಕೊಡುತ್ತಿದ್ದಾರೆ. ಗುತ್ತಿಗೆದಾರರಿಗೆ, ಕಾರ್ಮಿಕರಿಗೆ ಬೆದರಿಕೆ ಹಾಕಿ, ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ಮಾತನಾಡಿ ಗೂಂಡಾ ವರ್ತನೆ ಮಾಡುತ್ತಿದ್ದಾರೆ.
ಈ ವ್ಯಕ್ತಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪಾರ್ಕ್‌ನ ಪ್ಲಾಟ್ ನಂ. 48ರಲ್ಲಿ ವಿಭಜನೆ ತೋರಿಸಿ ಕ್ರ.ಸಂ. 49, 50, 51 ಹಾಗೂ 52ನೇ ನಿವೇಶನಗಳು ತಮ್ಮವು ಎಂದು ಹೇಳುತ್ತಿದ್ದಾರೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು ಸಹ ಶಾಮೀಲು ಇದ್ದಾರೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ರಾಚೋಟೇಶ್ವರ ನಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಗೌರವಾಧ್ಯಕ್ಷ ಸುಧೀರಸಿಂಹ ಘೋರ್ಪಡೆ, ಉಪಾಧ್ಯಕ್ಷರಾದ ಡಾ. ಎಸ್.ಆರ್. ಹಿರೇಮಠ, ಸದಸ್ಯರಾದ ಬಸವರಾಜ ಹಡಪದ, ಅಂಬರೀಶ ಇಟಗಿ, ಎಸ್.ಪಿ. ಪಾವನ, ನಂದಾ ಶಾಸ್ತ್ರಿ, ಈರಣ್ಣ ನವಲಿ, ನೀಲಮ್ಮ ಬೋಳನವರ, ಶರಣಪ್ಪ ಬೋಳನವರ, ಎಂ.ಬಿ. ತುಪ್ಪದ, ಮಂಜುನಾಥ ಮಾನೆ, ತೋಟಪ್ಪ ಕರಮುಡಿ ಮುಂತಾದವರು ಉಪಸ್ಥಿತರಿದ್ದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ ಅಧಿಕಾರಿಗಳ ಮೇಲೆ ಹಾಗೂ ಕಾನೂನುಬಾಹಿರವಾಗಿ ವರ್ತಿಸಿದ ಎಲ್ಲರ ಮೇಲೆ ಕ್ರಮ ಕೈಗೊಂಡು ಅಲ್ಲಿ ಸಾರ್ವಜನಿಕರಿಗೆ ತುರ್ತಾಗಿ ಬೇಕಾಗಿರುವ ಶುದ್ಧ ನೀರಿನ ಘಟಕದ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಿ ಅನುಕೂಲ ಮಾಡಿಕೊಡಬೇಕೆಂದು ರವಿ ಗುಂಜೀಕರ ಹೇಳಿದರು.



