ನಂದ್ಯಾಲ್: ಖಾಸಗಿ ಬಸ್ಸೊಂದು ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ಜರುಗಿದೆ.
ಈ ಅಪಘಾತ ಬೆಳಗಿನ ಜಾವ 1.30 ರ ಸುಮಾರಿಗೆ ಸಂಭವಿಸಿದೆ. ಆಂಧ್ರಪ್ರದೇಶದ ನೆಲ್ಲೂರಿನಿಂದ ತೆಲಂಗಾಣದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಬಸ್‌ನ ಬಲಭಾಗದ ಟೈರ್ ಸ್ಫೋಟಗೊಂಡಿತ್ತು. ಇದರಿಂದ ಚಾಲಕನ ನಿಯಂತ್ರಣ ತಪ್ಪಿ, ಬಸ್ ರಸ್ತೆ ವಿಭಜಕವನ್ನು ದಾಟಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ಬೈಕ್‌ಗಳನ್ನು ಸಾಗಿಸುತ್ತಿತ್ತು. ಡಿಕ್ಕಿಯ ತೀವ್ರತೆಯಿಂದ ಬಸ್ ಮತ್ತು ಲಾರಿ ಎರಡೂ ಬೆಂಕಿಗೆ ಆಹುತಿಯಾಗಿವೆ.
ಸ್ಥಳೀಯ ನಿವಾಸಿಗಳು, ಬಸ್ ಕ್ಲೀನರ್ ಹಾಗೂ ಕಂಡಕ್ಟರ್ ಕಿಟಕಿಗಳನ್ನು ಒಡೆದು ಒಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲು ಶ್ರಮಿಸಿದ್ದಾರೆ. ಆದರೂ ಬಸ್ ಚಾಲಕ, ಟ್ರಕ್ ಚಾಲಕ ಹಾಗೂ ಲಾರಿ ಕ್ಲೀನರ್ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಒಟ್ಟು 36 ಪ್ರಯಾಣಿಕರಲ್ಲಿ ನಾಲ್ವರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.



