ಗದಗ:- ಚಿನ್ನದ ನಿಧಿ ಪತ್ತೆ ಹಾಗೂ ಸರ್ಕಾರದ ಉತ್ಖನನ ಕಾರ್ಯ ಆರಂಭವಾದ ಬಳಿಕ ಐತಿಹಾಸಿಕ ಲಕ್ಕುಂಡಿಯಲ್ಲಿ ಜನರ ಬದುಕು ಬಂಗಾರವಾಗಿದ್ದು, ಜಮೀನಿನ ಬೆಲೆಗಳು ಆಕಾಶಕ್ಕೇರಿವೆ.

ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲಿರುವ ಜಮೀನುಗಳಿಗೆ ಭಾರೀ ಬೇಡಿಕೆ ಉಂಟಾಗಿದ್ದು, ಈ ಹಿಂದೆ ಎಕರೆಗೆ 30–40 ಲಕ್ಷ ರೂಪಾಯಿಗಳಷ್ಟಿದ್ದ ಜಮೀನಿನ ಬೆಲೆ ಇದೀಗ ಒಂದು ಕೋಟಿಗೆ ಏರಿಕೆಯಾಗಿದೆ. ಇದರಿಂದ ರೈತರ ಜಮೀನುಗಳಿಗೆ ಭಾರೀ ಡಿಮ್ಯಾಂಡ್ ಕಂಡುಬಂದಿದೆ.
ಉತ್ಖನನ ಕಾರ್ಯದಲ್ಲಿ ಇದುವರೆಗೆ ಅನೇಕ ಅಪರೂಪದ ಹಾಗೂ ಪ್ರಾಚೀನ ವಸ್ತುಗಳು ಪತ್ತೆಯಾಗಿದ್ದು, ಈ ಬೆಳವಣಿಗೆಗಳು ಭೂಮಿಯ ಬೆಲೆ ಏರಿಕೆಗೆ ಕಾರಣವಾಗಿವೆ. ಜನವರಿ 10ರಂದು ಲಕ್ಕುಂಡಿಯಲ್ಲಿ ಮನೆಗೆ ಪಾಯ ತೋಡುವ ವೇಳೆ ಬಂಗಾರದ ನಿಧಿ ಪತ್ತೆಯಾದ ನಂತರ ಲಕ್ಕುಂಡಿ ಹಲವು ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.
ಪ್ರಸ್ತುತ ಸರ್ಕಾರದ ವತಿಯಿಂದ ಉತ್ಖನನ ಕಾರ್ಯ ಮುಂದುವರಿದಿದ್ದು, ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆ ತ್ರಿ ಸ್ಟಾರ್ ಮತ್ತು ಫೈವ್ ಸ್ಟಾರ್ ಹೋಟೆಲ್ ಮಾಲೀಕರು ಲಕ್ಕುಂಡಿಯಲ್ಲಿ ಭೂಮಿ ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಪರಿಣಾಮವಾಗಿ, ಎರಡು ವರ್ಷಗಳ ಹಿಂದಿನ ದರಕ್ಕೆ ಹೋಲಿಸಿದರೆ ಲಕ್ಕುಂಡಿಯ ಜಮೀನಿನ ಬೆಲೆ ಎರಡು ರಿಂದ ಮೂರು ಪಟ್ಟು ಹೆಚ್ಚಾಗಿದೆ ಎಂದು ರೈತರು ತಿಳಿಸಿದ್ದಾರೆ.



