ಬೆಂಗಳೂರು, ಜನವರಿ 22: ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶನದ ಆರಂಭವೇ ಗದ್ದಲ, ಘೋಷಣೆ, ಎಳೆದಾಟ ಮತ್ತು ಹೈಡ್ರಾಮಾದಿಂದ ಸುದ್ದಿಯಾಯ್ತು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಒಂದೇ ವಾಕ್ಯದಲ್ಲಿ ಭಾಷಣ ಮುಗಿಸಿ ಸದನದಿಂದ ಹೊರಟ ಕ್ಷಣದಿಂದಲೇ ರಾಜಕೀಯ ವಾತಾವರಣ ಉದ್ವಿಗ್ನಗೊಂಡಿತು.
ರಾಜ್ಯಪಾಲರು ಹೊರಟಾಗ ಕಾಂಗ್ರೆಸ್ ನಾಯಕರು ಸದನದೊಳಗೆ ಘೋಷಣೆಗಳನ್ನು ಕೂಗುತ್ತಿದ್ದರು. ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಐವಾನ್ ಡಿಸೋಜಾ ಹಾಗೂ ಶಾಸಕರಾದ ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್, ಹೆಚ್.ಸಿ. ಬಾಲಕೃಷ್ಣ ಈ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ತೀವ್ರಗೊಂಡಾಗ ಮಾರ್ಷಲ್ಗಳು ಬಿ.ಕೆ. ಹರಿಪ್ರಸಾದ್ ಅವರನ್ನು ಬಲವಂತವಾಗಿ ಪಕ್ಕಕ್ಕೆ ಎಳೆದೊಯ್ಯುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ. ಇದರಿಂದ ಕೋಪಗೊಂಡ ಹರಿಪ್ರಸಾದ್ ಹಾಗೂ ಹೆಚ್.ಸಿ. ಬಾಲಕೃಷ್ಣ ಮತ್ತೆ ಹಿಂದಿರುಗಿ ಮಾರ್ಷಲ್ ಹಿಡಿದು ಎಳೆದಾಡಿದ್ದು, ಸದನದೊಳಗೆ ಗದ್ದಲ ಮತ್ತಷ್ಟು ಉಗ್ರಗೊಂಡಿತು.
ಈ ಗೊಂದಲದ ನಡುವೆ ಬಿ.ಕೆ. ಹರಿಪ್ರಸಾದ್ ಅವರ ಬಟ್ಟೆ ಹರಿದಿದ್ದು, “ಬಿಜೆಪಿಯವರೇ ಬಟ್ಟೆ ಎಳೆದು ಹರಿಸಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಈ ಸಂಪೂರ್ಣ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.



