ಬೆಂಗಳೂರು:- ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ಮಾಡಿದ್ದಾರೆ.
ರಾಜ್ಯಪಾಲರು ಅಧಿವೇಶನ ಆರಂಭಿಸಿ ಆರಂಭಿಕ ಸಾಲನ್ನು ಹೇಳಿ ಸದನದಿಂದ ಹೊರ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ. ರಾಜ್ಯ ಸರ್ಕಾರದ ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣ ಓದದೇ ಸಂವಿಧಾನದ ವಿಧಿಯನ್ನ ಉಲ್ಲಂಘನೆ ಮಾಡಿದ್ದಾರೆ. ಯಾವುದೇ ಸರ್ಕಾರ ಬಂದಾಗ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯ. ಆರ್ಟಿಕಲ್ 176(1), 163 ರ ಉಲ್ಲಂಘನೆ ಬಹಳ ಸ್ಪಷ್ಟವಾಗಿದೆ. ಈ ವಿಧಿಗಳ ಅನ್ವಯ ರಾಜ್ಯಪಾಲರು ತಾವು ತಯಾರು ಮಾಡಿದ ಭಾಷಣ ಓದುವಂತಿಲ್ಲ. ರಾಜ್ಯ ಸರ್ಕಾದ ಸಂಪುಟ ಸಿದ್ಧಪಡಿಸಿದ ಭಾಷಣವನ್ನ ಓದಲೇಬೇಕು ಎಂದು ಹೇಳಿದರು
ಇದು ವರ್ಷದ ಮೊದಲ ಜಂಟಿ ಅಧಿವೇಶನ, ಜೊತೆಗೆ ವಿಶೇಷ ಅಧಿವೇಶನವೂ ಕೂಡ ಹೌದು. ಏಕೆಂದ್ರೆ, ಕೇಂದ್ರ ಸರ್ಕಾರ ನರೇಗಾ ರದ್ದು ಮಾಡಿ ವಿಬಿಜಿರಾಮ್‌ಜಿ ಕಾಯ್ದೆಯನ್ನ ಹೊಸದಾಗಿ ಕೇಂದ್ರ ಸರ್ಕಾರ ಮಾಡಿದೆ. ಇದಕ್ಕೆ ನಮ್ಮ ಸರ್ಕಾರದಿಂದ ತೀವ್ರ ವಿರೋಧ ಇದೆ. ಮಹಾತ್ಮ ಗಾಂಧಿ ಹೆಸರು ತೆಗೆದಿರೋದಕ್ಕೆ ನಮ್ಮ ವಿರೋಧ ಇದೆ. 20 ವರ್ಷಗಳ ಹಿಂದೆ ಅಂದ್ರೆ 2005 ರಲ್ಲಿ ದಿ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನ ನಿರ್ದೇಶನಗಳಲ್ಲಿ ಇರುವಂತೆ ರೈಟ್ ಟು ವರ್ಕ್, ರೈಟ್ ಟು ಫುಡ್, ರೈಟ್ ಟು ಎಜುಕೇಶನ್, ಆರ್‌ಟಿಐ ಕಾಯ್ದೆಗಳನ್ನ ಜಾರಿಗೆ ತಂದರು.
ಕೆಲಸದ ಹಕ್ಕು ಹಳ್ಳಿಯಲ್ಲಿರುವ ಬಡವರಿಗೆ ಕನಿಷ್ಠ 100 ದಿನಗಳ ಉದ್ಯೋಗ ಕೊಡಬೇಕು ಎನ್ನುವಂತಹದ್ದು. ಇದರಲ್ಲಿ ಮಹಿಳೆಯರು, ಸಣ್ಣ ರೈತರಿಗೆ ಅನುಕೂಲವಾಗುತ್ತಿತ್ತು. 53% ಮಹಿಳೆಯರು 28% ದಲಿತರಿದ್ದಾರೆ. ಇವರಿಗೆ ಉದ್ಯೋಗ ಕೊಡ್ತೀವಿ ಅಂತ ಖಾತ್ರಿ ಇಲ್ಲ. ಹಾಗಾಗಿ ಅವರು ಕೇಳಿದ ಜಾಗದಲ್ಲಿ, ಸಣ್ಣ ರೈತರು ಜಮೀಮಿನುಗಳಲ್ಲೇ ಕೆಲಸ ಮಾಡಿಕೊಳ್ಳಲು ಅವಕಾಶ ಇತ್ತು, 365 ದಿನಗಳಲ್ಲಿ ಯಾವಾಗ ಕೆಲಸ ಕೇಳಿದ್ರೂ ಕೆಲಸ ಕೊಡಬಹುದಿತ್ತು. ಆದ್ರೆ ವಿಬಿಜಿರಾಮ್‌ಜಿ ಕಾಯ್ದೆ ಅನ್ವಯ ಕೇಂದ್ರ ಸರ್ಕಾರ ಎಲ್ಲಿ ಹೇಳುತ್ತದೋ ಅಲ್ಲಿ ಕೆಲಸ ಮಾಡಬೇಕು. ಜೊತೆಗೆ ಆಕ್ಷನ್ ಪ್ಲ್ಯಾನ್ ಮಾಡುವುದು ಆಯಾ ಪಂಚಾಯ್ತಿಗಳು, ಇದನ್ನ ಜಿರಾಮ್‌ಜಿ ಕಾಯ್ದೆಯಲ್ಲಿ ತೆಗೆದುಹಾಕಲಾಗಿದೆ ಎಂದು ಕಿಡಿ ಕಾರಿದರು.



