ವಿಜಯಸಾಕ್ಷಿ ಸುದ್ದಿ, ಡಂಬಳ: ಗದಗ ಜಿಲ್ಲೆಯ ಮುಂಡರಗಿ, ಗದಗ, ನರಗುಂದ, ರೋಣ, ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡ ತಾಲೂಕುಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಎರಡಂಕಿಯಿಂದ ಒಂದಂಕಿಯೊಳಗೆ ತರಲು ಶ್ರಮಿಸುತ್ತಿರುವ ಶಿಕ್ಷಣ ಇಲಾಖೆ, ಅದಕ್ಕಾಗಿ ಹಲವು ವಿನೂತನ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಶಾಲೆಗಳಲ್ಲಿ 29 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ಇಲಾಖೆ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಮತ್ತು ಒತ್ತಡ ನಿವಾರಣೆಗೆ ವಿಶೇಷ ಒತ್ತು ಕೊಟ್ಟಿದೆ.
2024-25ರಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗದಗ ಜಿಲ್ಲೆ 17ನೇ ಸ್ಥಾನ ಗಳಿಸಿದೆ. ಪರೀಕ್ಷೆಗೆ ಹಾಜರಾದ 15,545 ವಿದ್ಯಾರ್ಥಿಗಳ ಪೈಕಿ 11,621 ವಿದ್ಯಾರ್ಥಿಗಳು ಪಾಸಾಗಿದ್ದು ಶೇ 74.76ರಷ್ಟು ಫಲಿತಾಂಶ ದಾಖಲಾದರೆ, 2025ರ ಫಲಿತಾಂಶದ ಪ್ರಕಾರ ಜಿಲ್ಲೆಯು ಶೇ. 67.7ರಷ್ಟು ಉತ್ತೀರ್ಣತೆಯ ಪ್ರಮಾಣದೊಂದಿಗೆ 17ನೇ ಸ್ಥಾನವನ್ನು ಉಳಿಸಿಕೊಂಡಿದೆ. ಈ ವರ್ಷ ಎರಡಂಕಿ ಸ್ಥಾನವನ್ನು ಒಂದಂಕಿಗೆ ಇಳಿಸುವ ಗುರಿ ಹೊಂದಿರುವ ಇಲಾಖೆ, ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ.
2026ರಲ್ಲಿ ಗದಗ-4865, ಮುಂಡರಗಿ-1906, ನರಗುಂದ-1416, ರೋಣ-3783, ಶಿರಹಟ್ಟಿ-2698 ಹೀಗೆ ಒಟ್ಟು 14665 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ.
29 ಅಂಶಗಳ ಕಾರ್ಯಕ್ರಮದ ಪೈಕಿ ಪ್ರಮುಖವಾಗಿ ಡಿಸೆಂಬರ್ ಅಂತ್ಯದೊಳಗೆ ಎಲ್ಲ ಪಠ್ಯ ವಿಷಯಗಳ ಬೋಧನೆ ಪೂರ್ಣಗೊಳಿಸಲಾಗಿದೆ. ಪ್ರತಿದಿನ ಶಾಲೆ, ಕಾಲೇಜು ಅವಧಿಯ ಮೊದಲು ಮತ್ತು ನಂತರ ಒಂದು ವಿಷಯಕ್ಕೆ ವಿಶೇಷ ತರಗತಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಓದಿನಲ್ಲಿ ತೊಡಗಿರುವುದನ್ನು ಪರಿಶೀಲಿಸಲು ಪ್ರತಿ ದಿನ ಮುಂಜಾನೆ ಮತ್ತು ಸಂಜೆ ಶಿಕ್ಷಕರು ವೇಕ್‌ಅಪ್ ಕಾಲ್ ಮಾಡುತ್ತಿದ್ದಾರೆ.
ಕಲಿಕೆಯಲ್ಲಿ ಸರಾಸರಿ, ಸರಾಸರಿಗಿಂತ ಕಡಿಮೆ ಮತ್ತು ಸರಾಸರಿಗಿಂತ ಉತ್ತಮವಾಗಿರುವ ವಿದ್ಯಾರ್ಥಿಗಳ ಗುಂಪುಗಳನ್ನು ಪ್ರತ್ಯೇಕವಾಗಿ ರಚಿಸಿ ಪ್ರತಿ ಶಿಕ್ಷಕರಿಗೆ ಸಮಾನವಾಗಿ ವಿದ್ಯಾರ್ಥಿಗಳನ್ನು ನೀಡಲಾಗಿದೆ. ಪ್ರತಿ 15 ದಿನಗಳಿಗೊಮ್ಮೆ ಪೋಷಕರ ಸಭೆ ನಡೆಸಿ ಮಕ್ಕಳ ಕಲಿಕಾ ಪ್ರಗತಿ ಒಪ್ಪಿಸುವ ಕಾರ್ಯವನ್ನು ಪ್ರೌಢಶಾಲಾ ಶಿಕ್ಷಕರು ಮತ್ತು ಪಿಯು ಕಾಲೇಜು ಉಪನ್ಯಾಸಕರು ಮಾಡುತ್ತಿದ್ದಾರೆ.
ನಿರಂತರವಾಗಿ ಶಾಲೆಗೆ ಗೈರು ಹಾಜರಾಗುವ ವಿದ್ಯಾರ್ಥಿಗಳ ಕೇಸ್ ಸ್ಟಡಿ ನಡೆಸಿ ಪರಿಹಾರ ಕ್ರಮವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ. ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಿ ಪ್ರತಿ ಶಿಕ್ಷಕರಿಗೆ ಸಮಾನವಾಗಿ ವಿದ್ಯಾರ್ಥಿಗಳನ್ನು ದತ್ತು ನೀಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷವಾಗಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಲ್ಲದೆ ಉಪನ್ಯಾಸಕರು ಹಾಗೂ ವಿಷಯ ಪರಿವೀಕ್ಷಕರಿಗೆ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳನ್ನು ದತ್ತು ನೀಡಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪ್ರತಿ ದಿನ ಎರಡರಿಂದ ಮೂರು ಶಾಲೆಗಳಿಗೆ ಭೇಟಿ ನೀಡಿ ಎಸ್‌ಎಸ್‌ಎಲ್‌ಸಿ ಮಕ್ಕಳ ಕಲಿಕಾ ಮಟ್ಟವನ್ನು ಪರೀಕ್ಷಿಸುತ್ತಿದ್ದೇನೆ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಶಿಕ್ಷಕರಿಗೆ ದತ್ತು ನೀಡಲಾಗಿದೆ. ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳನ್ನು ಉಪನ್ಯಾಸಕರು ಮತ್ತು ವಿಷಯ ಪರಿವೀಕ್ಷಕರಿಗೆ ಮೇಲ್ವಿಚಾರಣಾ ಅಧಿಕಾರಿಗಳಿಗೆ ದತ್ತು ನೀಡಲಾಗಿದೆ.
-
ಆರ್.ಎಸ್. ಬುರಡಿ.
ಉಪನಿದೇಶಕರು, ಶಾಲಾ ಶಿಕ್ಷಣ ಇಲಾಖೆ.



