ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಸಂಚಾರಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಕಳೆದ ವರ್ಷ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಸಿಕ್ಕಿಬಿದ್ದ 12,900 ಚಾಲಕರ ಪೈಕಿ 11,500 ಜನರ ಚಾಲನಾ ಪರವಾನಗಿಯನ್ನು (ಡಿಎಲ್) ರದ್ದು ಮಾಡಲಾಗಿದೆ.
ಈ ಕುರಿತು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸ್ಪಷ್ಟಪಡಿಸಿದ್ದು, ಪದೇ ಪದೇ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಚಾಲಕರ ಡಿಎಲ್‌ಗಳನ್ನು ಪರಿಶೀಲಿಸಿ ರದ್ದುಗೊಳಿಸಲಾಗಿದೆ ಎಂದರು. ಉಳಿದ ಪ್ರಕರಣಗಳ ಪರಿಶೀಲನೆಯೂ ಮುಂದುವರಿದಿದೆ. ಇತ್ತೀಚೆಗೆ ಶಾಲಾ ವಾಹನ ಚಾಲಕರು ಕುಡಿದು ವಾಹನ ಚಾಲನೆ ಮಾಡುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ನಗರಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, 5,110 ಶಾಲಾ ವಾಹನಗಳ ತಪಾಸಣೆಯಲ್ಲಿ 26 ಬಸ್ ಚಾಲಕರು ಮದ್ಯಪಾನ ಮಾಡಿಕೊಂಡು ಚಾಲನೆ ಮಾಡುತ್ತಿರುವುದು ಪತ್ತೆಯಾಗಿದೆ.
ಈ ಚಾಲಕರ ವಿರುದ್ಧ ಭಾರತೀಯ ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಡಿಎಲ್ ರದ್ದುಗೊಳಿಸುವಂತೆ ಆರ್‌ಟಿಒಗೆ ವರದಿ ಸಲ್ಲಿಸಲಾಗಿದೆ. ಶಾಲಾ ಆಡಳಿತ ಮಂಡಳಿಗಳ ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.



