ಬೆಂಗಳೂರು: ಮಹಿಳೆ ಮರೆತು ಹೋಗಿದ್ದ ಪರ್ಸ್ ಹಾಗೂ ಐಫೋನ್ ಅನ್ನು ಪ್ರಾಮಾಣಿಕತೆಯಿಂದ ಹಿಂದಿರುಗಿಸಿದ ಆಟೋ ಚಾಲಕನ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉತ್ತರ ಭಾರತ ಮೂಲದ ಮಹಿಳೆಯೊಬ್ಬರು ರ‍್ಯಾಪಿಡೊ ಮೂಲಕ ಆಟೋ ಬುಕ್ ಮಾಡಿಕೊಂಡು ಪ್ರಯಾಣಿಸಿದ್ದರು. ಪ್ರಯಾಣ ಮುಗಿದ ಬಳಿಕ ಆಟೋದಿಂದ ಇಳಿದ ಮಹಿಳೆ, ತನ್ನ ಪರ್ಸ್ ಮತ್ತು ಐಫೋನ್ ಅನ್ನು ಆಟೋದಲ್ಲೇ ಮರೆತು ಹೋಗಿದ್ದರು. ಕೆಲ ಸಮಯದ ನಂತರ ಈ ವಿಷಯ ಗಮನಕ್ಕೆ ಬಂದಾಗ ಮಹಿಳೆ ಕೊತ್ತನೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು.
ಪೊಲೀಸರು ತಕ್ಷಣವೇ ಆಟೋ ಚಾಲಕನಿಗೆ ಕರೆ ಮಾಡಿದಾಗ, ಚಾಲಕ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ, ಪರ್ಸ್ ಮತ್ತು ಮೊಬೈಲ್ ಫೋನ್ ಅನ್ನು ಮಹಿಳೆಗೆ ಸುರಕ್ಷಿತವಾಗಿ ಮರಳಿಸಿದರು. ಆಟೋ ಚಾಲಕನ ಪ್ರಾಮಾಣಿಕತೆಗೆ ಮಹಿಳೆ ಹಾಗೂ ಪೊಲೀಸ್ ಸಿಬ್ಬಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.



