ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತನ ಮೇಲೆ ದಾಳಿ ಮಾಡಿ ಕೊಂದಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಕೈಗೆ ಸಿಕ್ಕಿದೆ. ತಾಳು ಬೆಟ್ಟದಿಂದ ಪಾದಯಾತ್ರೆ ಮೂಲಕ ಎಂ.ಎಂ. ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿದ್ದು, ಪ್ರಕರಣ ಜನರಲ್ಲಿ ಆತಂಕ ಮೂಡಿಸಿತ್ತು.
ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ವಿಶೇಷ ಚಿರತೆ ಕಾರ್ಯಪಡೆ, ಡ್ರೋನ್ ಮೇಲ್ವಿಚಾರಣೆ ಹಾಗೂ ಸ್ಥಳೀಯ ಮಟ್ಟದಲ್ಲಿ ತೀವ್ರ ಕಣ್ಗಾವಲು ಮೂಲಕ ಚಿರತೆಯ ಚಲನವಲನವನ್ನು ಪತ್ತೆ ಹಚ್ಚಲಾಯಿತು. ಕೊನೆಗೆ ಅರವಳಿಕೆ ನೀಡಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಕಾರ್ಯಾಚರಣೆಯಲ್ಲಿ ಪಶುವೈದ್ಯರಾದ ಆದರ್ಶ್ ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು. ಸೆರೆ ಸಿಕ್ಕಿರುವುದು ಸುಮಾರು 2ರಿಂದ 3 ವರ್ಷದ ಗಂಡು ಚಿರತೆ ಎಂದು ತಿಳಿದುಬಂದಿದೆ. ಈ ಚಿರತೆಯನ್ನು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ.
ಇದೇ ವೇಳೆ, ಚಿರತೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಉಸ್ತುವಾರಿ ಸಚಿವ ವೆಂಕಟೇಶ್ ಅವರು 5 ಲಕ್ಷ ರೂಪಾಯಿ ಪರಿಹಾರ ಮೊತ್ತದ ಚೆಕ್ ಹಸ್ತಾಂತರಿಸಿದ್ದಾರೆ.



