ಧಾರವಾಡ: ಧಾರವಾಡ ಹೊರವಲಯದಲ್ಲಿ ನಡೆದ ಯುವತಿ ಝಾಕಿಯಾ ಕೊಲೆ ಪ್ರಕರಣ ಇದೀಗ ರಾಜ್ಯವನ್ನೇ ಬೆಚ್ಚಿಬೀಳಿಸುವ ಹಂತ ತಲುಪಿದೆ. ಪ್ರಕರಣದ ತನಿಖೆಯಲ್ಲಿ ಒಂದಕ್ಕೊಂದು ಶಾಕಿಂಗ್ ವಿಚಾರಗಳು ಬೆಳಕಿಗೆ ಬರುತ್ತಿವೆ.
ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಝಾಕಿಯಾ ಹಾಗೂ ಸಾಬೀರ್ ಸಂಬಂಧಕ್ಕೆ ಎರಡೂ ಕುಟುಂಬಗಳೂ ಒಪ್ಪಿಗೆ ನೀಡಿದ್ದು, ಮದುವೆಗೂ ನಿಶ್ಚಯವಾಗಿತ್ತು. ಆದರೆ ಪ್ರೇಮ ಕಥೆಯೇ ಕೊನೆಯಲ್ಲಿ ಭೀಕರ ಅಂತ್ಯ ಕಂಡಿದೆ.
ಜನವರಿ 21ರಂದು ಸಾಬೀರ್ ಪರಿಚಯಸ್ಥರ ಕಾರಿನಲ್ಲಿ ಝಾಕಿಯಾಳನ್ನು ಕರೆದುಕೊಂಡು ಹೊರಗೆ ಹೋಗಿದ್ದ. ಬಳಿಕ ಇಬ್ಬರೂ ನಿರ್ಜನ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಕಾರಿನೊಳಗೆ ಜಗಳ ನಡೆದಿದೆ. ಮಾತಿನ ಜಗಳ ಕ್ರಮೇಣ ವಿಕೋಪಕ್ಕೆ ತಿರುಗಿ, ಆಕ್ರೋಶದ ಭರದಲ್ಲಿ ಸಾಬೀರ್ ಝಾಕಿಯಾಳ ವೇಲ್ ಬಳಸಿ ಆಕೆಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾನೆ.
ಹತ್ಯೆ ಮಾಡಿದ ನಂತರ ಶವವನ್ನು ಅಲ್ಲಿಯೇ ಬಿಟ್ಟು, ಝಾಕಿಯಾಳ ಮೊಬೈಲ್‌ನಿಂದಲೇ ಆಕೆಯ ತಂದೆಗೆ ‘ನನಗೆ ಜೀವನ ಸಾಕಾಗಿದೆ, ಮನೆಗೆ ಬರೋದಿಲ್ಲ, ನನ್ನನ್ನು ಹುಡುಕಬೇಡಿ’ ಎಂಬ ಮೆಸೇಜ್ ಕಳುಹಿಸಿ, ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಸ್ಥಳದಲ್ಲೇ ಬಿಟ್ಟು ಹೋಗಿದ್ದಾನೆ.
ಶವ ಪತ್ತೆಯಾದ ಮಾರನೇ ದಿನ, ಸಾಬೀರ್ ತನಗೆ ಏನೂ ಗೊತ್ತಿಲ್ಲ ಎಂಬಂತೆ ಘಟನಾ ಸ್ಥಳಕ್ಕೆ ಬಂದಿದ್ದಾನೆ. ಆದರೆ ಈ ನಡುವೆ ಆತ ತನ್ನ ಮೊಬೈಲ್‌ನಲ್ಲಿದ್ದ ಝಾಕಿಯಾಳ ಫೋಟೋಗಳು, ಕಾಲ್ ಹಿಸ್ಟರಿ ಹಾಗೂ ವಾಟ್ಸಪ್ ಚಾಟಿಂಗ್‌ಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದ್ದ. ಈ ಅನುಮಾನಾಸ್ಪದ ನಡೆ ಪೊಲೀಸರ ಗಮನ ಸೆಳೆದು, ತನಿಖೆ ತೀವ್ರಗೊಂಡಿತು.
ಪೊಲೀಸರು ಸಾಬೀರ್‌ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ಮಾಡಿದ ಸಂಪೂರ್ಣ ಸತ್ಯ ಬಯಲಾಗಿದ್ದು, ಇದೀಗ ಹೆಚ್ಚಿನ ವಿಚಾರಣೆ ಮುಂದುವರೆದಿದೆ. ಧಾರವಾಡ ಪೊಲೀಸರು ಸ್ಥಳ ಮಹಜರು ಕೂಡ ಪೂರ್ಣಗೊಳಿಸಿದ್ದಾರೆ.



