ದಾವೋಸ್: ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮಾವೇಶದ ಸಂದರ್ಭದಲ್ಲಿ, ಯುರೋಪ್ ಮುಕ್ತ ವ್ಯಾಪಾರ ಒಪ್ಪಂದದ ಭಾಗವಾಗಿರುವ ಬಂಡವಾಳ ಹೂಡಿಕೆ ಬದ್ಧತೆಯ ಬಹುಪಾಲನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ರಾಜ್ಯ ಸರ್ಕಾರವು ಲಿಚೆಂಟೈನ್ ಪ್ರಧಾನಿಗೆ ಮನವಿ ಮಾಡಿಕೊಂಡಿದೆ.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಲಿಚೆಂಟೈನ್ ಪ್ರಧಾನಿ ಬ್ರಿಗೆಟ್ ಹ್ಯಾಸ್ ಅವರನ್ನು ಭೇಟಿ ಮಾಡಿ, ಆ ದೇಶದ ಕೈಗಾರಿಕಾ ಪರಿಣತಿಯನ್ನು ಕರ್ನಾಟಕದ ತಯಾರಿಕಾ ಹಾಗೂ ನಾವೀನ್ಯತಾ ಪರಿಸರದೊಂದಿಗೆ ಸಮರ್ಥವಾಗಿ ಬಳಸಿಕೊಳ್ಳುವ ಕುರಿತು ಫಲಪ್ರದ ಚರ್ಚೆ ನಡೆಸಿದರು. ಈ ವೇಳೆ ದ್ವಿಪಕ್ಷೀಯ ವಾಣಿಜ್ಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಲಿಚೆಂಟೈನ್ ಪ್ರಧಾನಿಗೆ ರಾಜ್ಯಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಲಾಯಿತು.
ಇದೇ ವೇಳೆ ಜಾಗತಿಕ ಕ್ಲೌಡ್ ಮತ್ತು ಡಿಜಿಟಲ್ ಮೂಲಸೌಲಭ್ಯ ಕಂಪನಿಗಳನ್ನು ರಾಜ್ಯಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಅಮೆಜಾನ್ ವೆಬ್ ಸರ್ವಿಸಸ್ ಉಪಾಧ್ಯಕ್ಷ ಮೈಕಲ್ ಪುಂಕೆ ಅವರೊಂದಿಗೆ ವಿವರವಾದ ಮಾತುಕತೆ ನಡೆಸಲಾಗಿದ್ದು, ಕರ್ನಾಟಕದಲ್ಲಿನ ಕುಶಲ ತಂತ್ರಜ್ಞರು, ನವೋದ್ಯಮಗಳು ಮತ್ತು ಡಿಜಿಟಲ್ ಮೂಲಸೌಲಭ್ಯಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡೇಟಾ ಸೆಂಟರ್ ಕ್ಷೇತ್ರಕ್ಕೆ ಅಗತ್ಯವಾದ ಉತ್ತೇಜನೆಗಳು, ವಿದ್ಯುತ್ ಲಭ್ಯತೆ ಹಾಗೂ ಮೂಲಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ. ಅಲ್ಲದೆ ಉದ್ಯಮ ಸ್ನೇಹಿ ವಾತಾವರಣದ ಬಗ್ಗೆ ವೋಲ್ವೊ ಕಂಪನಿಯೂ ತೃಪ್ತಿ ವ್ಯಕ್ತಪಡಿಸಿದ್ದು, ತಯಾರಿಕೆ, ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳ ಸದ್ಬಳಕೆಯ ಮೂಲಕ ರಾಜ್ಯದಲ್ಲಿನ ವಾಹನ ತಯಾರಿಕಾ ಚಟುವಟಿಕೆಗಳನ್ನು ವಿಸ್ತರಿಸಲು ಸರ್ಕಾರ ಆಹ್ವಾನ ನೀಡಿದೆ.



