ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಅಪ್ರಾಪ್ತರು ವಾಹನವನ್ನು ಚಾಲನೆ ಮಾಡಬಾರದು. ಇದನ್ನು ಉಲ್ಲಂಘಿಸಿದರೆ 25 ಸಾವಿರ ರೂ ದಂಡ ತೆರಬೇಕಾಗುತ್ತದೆ. ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ವಾಹನದ ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು. ಪ್ರತಿ ಶಾಲೆಗಳಲ್ಲಿಯೂ ಸಹ ಈ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು. ಪ್ರತಿಯೊಬ್ಬರೂ ರಸ್ತೆ ಸುರಕ್ಷತೆಯ ನಿಯಮಗಳನ್ನು ಪಾಲಿಸಿ ಅಪಘಾತಗಳು ಸಂಭವಿಸದಂತೆ ಎಚ್ಚರವಾಗಿರಬೇಕು ಎಂದು ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಲಕ್ಷ್ಮೇಶ್ವರದ ನ್ಯಾಯಾಧೀಶ ಸತೀಶ ಎಂ ಹೇಳಿದರು.
ಅವರು ಶುಕ್ರವಾರ ಶಿರಹಟ್ಟಿ ಪಟ್ಟಣದಲ್ಲಿಯ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ತಾಲೂಕು ಪಂಚಾಯತ್ ಸಭಾಭವನದಲ್ಲಿ ಜರುಗಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪಘಾತದ ಪ್ರಮಾಣವನ್ನು ಕಡಿಮೆ ಮಾಡುವುದು ಹಾಗೂ ರಸ್ತೆ ಸುರಕ್ಷತೆಯ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವುದಕ್ಕಾಗಿ ಸಾರ್ವಜನಿಕರಿಗೆ ಇಂತಹ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದ್ದು, ಇದನ್ನು ಎಲ್ಲರೂ ಪಾಲಿಸಿ ಜೀವ ರಕ್ಷಣೆಗೆ ಆದ್ಯತೆ ನೀಡಬೇಕೆಂದು ಹೇಳಿದರು.
ಇದಕ್ಕೂ ಮುನ್ನ ತಹಸೀಲ್ದಾರ ಕಚೇರಿಯಿಂದ ಜಾಥಾ ಪ್ರಾರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ಪಂಚಾಯತ್ ಸಭಾಭವನದವರೆಗೆ ತಲುಪಿತು. ಈ ಸಂದರ್ಭದಲ್ಲಿ ವಿವಿಧ ಶಾಲೆಯ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ, ಉಪ ತಹಸೀಲ್ದಾರ ವಿ.ಎ. ಮುಳಗುಂದಮಠ, ಬಿಇಓ ಎಚ್.ನಾಣಕಿನಾಯ್ಕ, ಸರ್ಕಾರಿ ಸಹಾಯಕ ಅಭಿಯೋಜಕಿ ಎಚ್.ಎ. ಗುಂಜಾಳ, ಎನ್.ಸಿ. ಪಾಟೀಲ, ಅರುಣ ಎಫ್.ಕಟ್ಟಿಮನಿ, ರಾಜು ನಾಯಕ ಮುಂತಾದವರು ಉಪಸ್ಥಿತರಿದ್ದರು.



