ಬಳ್ಳಾರಿ: ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಶಾಸಕ ಶ್ರೀರಾಮುಲುಗೆ ಸಂಬಂಧಿಸಿದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ, ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು 8 ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಳ್ಳಾರಿ ನಗರದ ಕೌಲ್ ಬಜಾರ್ ಪ್ರದೇಶದ ಎಂಟು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರೀಲ್ಸ್ ಮಾಡುವ ಉದ್ದೇಶದಿಂದಲೇ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರುಕ್ಮಿಣಿ ಅವೆನ್ಯೂ ಲೇಔಟ್ (ಜಿ ಸ್ಕ್ವೇರ್) ನ ಸೈಟ್ ಎಂಜಿನಿಯರ್ ರಿಜ್ವಾನ್ ಈ ಕುರಿತು ದೂರು ನೀಡಿದ್ದಾರೆ. ಶುಕ್ರವಾರ ಸಂಜೆ ಸುಮಾರು 5:30ರ ವೇಳೆಗೆ 20 ರಿಂದ 25 ವರ್ಷ ವಯಸ್ಸಿನ 8ರಿಂದ 10 ಮಂದಿ ಕಿಡಿಗೇಡಿಗಳು ಬಂದು ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೆಂಕಿಗೆ ಆಹುತಿಯಾದ ಮಾಡೆಲ್ ಹೌಸ್, ಜನಾರ್ದನ ರೆಡ್ಡಿ ಅವರ ಪತ್ನಿ ಜಿ. ಲಕ್ಷ್ಮೀ ಅವರಿಗೆ ಸೇರಿದೆ. ದುರುದ್ದೇಶದಿಂದಲೇ ಬೆಂಕಿ ಹಚ್ಚಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮನೆಗೆ ಬೆಂಕಿ ಬಿದ್ದ ಪರಿಣಾಮ ಟಿವಿ, ಕುರ್ಚಿಗಳು, ಸೋಫಾ ಸೆಟ್‌ಗಳು, ಕಿಚನ್ ಸೆಟ್, ಏಸಿ, ಫ್ರಿಡ್ಜ್, ಪಿಓಪಿ ಕೆಲಸ, ವುಡನ್ ಬಾಗಿಲುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಂದಾಜು ₹1.25 ಕೋಟಿ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ದೂರು ನೀಡಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇತ್ತೀಚಿನ ಬ್ಯಾನರ್ ಗಲಭೆ ವೇಳೆ ಶಾಸಕ ಭರತ್ ರೆಡ್ಡಿ ‘ಬಳ್ಳಾರಿಯನ್ನು ಭಸ್ಮ ಮಾಡುತ್ತೇವೆ’ ಎಂಬ ಹೇಳಿಕೆ ನೀಡಿದ್ದರು ಎಂಬುದನ್ನು ಉಲ್ಲೇಖಿಸಿ, ಆ ದಿಕ್ಕಿನಲ್ಲಿ ತನಿಖೆ ನಡೆಸುವಂತೆ ದೂರುದಲ್ಲಿ ಮನವಿ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸರು ಮುಂದಾಗಿದ್ದು, ಇಬ್ಬರು ಎಫ್‌ಎಸ್‌ಎಲ್ ಅಧಿಕಾರಿಗಳು ಸೇರಿದಂತೆ ಪೊಲೀಸ್ ತಂಡದಿಂದ ತನಿಖೆ ನಡೆಯುತ್ತಿದೆ.



