ಬೆಂಗಳೂರು: 25 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯವು ಅಬಕಾರಿ ಇಲಾಖೆಯ ಡಿಸಿ ಜಗದೀಶ್, ತಮ್ಮಣ್ಣ ಹಾಗೂ ಕಾನ್ಸಟೇಬಲ್ ಲಕ್ಕಪ್ಪ ಅವರಿಗೆ ಜಾಮೀನು ನೀಡಿದೆ.
ನಿನ್ನೆ ನ್ಯಾಯಾಲಯ ಈ ಮೂವರು ಆರೋಪಿಗಳಿಗೆ ಜಾಮೀನು ನೀಡಿದ್ದು, ಪ್ರಮುಖ ಆರೋಪಿ ಆಗಿರುವ ಅಬಕಾರಿ ಡಿಸಿ ಜಗದೀಶ್ ಅವರಿಗೆ ಆರೋಗ್ಯ ಕಾರಣಗಳನ್ನು ಆಧಾರವಾಗಿಸಿಕೊಂಡು ಜಾಮೀನು ಮಂಜೂರು ಮಾಡಲಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ, ಇತ್ತೀಚೆಗೆ ಜಗದೀಶ್ ಅವರ ಕುಟುಂಬದ ಸದಸ್ಯರೊಬ್ಬರು ನಿಧನರಾಗಿರುವುದನ್ನೂ ನ್ಯಾಯಾಲಯ ಪರಿಗಣಿಸಿದೆ ಎನ್ನಲಾಗಿದೆ.
25 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಈ ಮೂವರು ಆರೋಪಿಗಳು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಈ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಪ್ರಕರಣ ಸಂಬಂಧ ಲೋಕಾಯುಕ್ತ ತನಿಖೆ ಮುಂದುವರಿದಿದ್ದು, ಮುಂದಿನ ವಿಚಾರಣೆಗೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.



