ಅರ್ಜುನ್ ಜನ್ಯ ನಿರ್ದೇಶನದ, ಶಿವರಾಜ್ ಕುಮಾರ್–ಉಪೇಂದ್ರ–ರಾಜ್ ಬಿ ಶೆಟ್ಟಿ ಅಭಿನಯದ ‘45’ ಸಿನಿಮಾ ಈಗ ಒಟಿಟಿ ಪ್ಲಾಟ್ಫಾರ್ಮ್ ಜೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ, ಸಿನಿಮಾದ ಟೈಟಲ್ ವಿಚಾರವಾಗಿ ಈಗ ಹೊಸ ವಿವಾದ ಸದ್ದು ಮಾಡುತ್ತಿದೆ.
ನಟ ಹಾಗೂ ಕಿರುತೆರೆ ಕಲಾವಿದ ಮಿತ್ರ, ‘45’ ಟೈಟಲ್ ಮೂಲತಃ ತಮ್ಮದಾಗಿತ್ತು ಎಂದು ಬಹಿರಂಗವಾಗಿ ಹೇಳಿದ್ದಾರೆ. ಸಿನಿಮಾಕ್ಕೆ ಈ ಶೀರ್ಷಿಕೆ ಫೈನಲ್ ಮಾಡಿದಾಗ, ಈ ಟೈಟಲ್ ಈಗಾಗಲೇ ಮಿತ್ರ ಅವರ ಬ್ಯಾನರ್ ಅಡಿಯಲ್ಲಿ ನೋಂದಾಯಿತವಾಗಿತ್ತು. ಹೀಗಾಗಿ ನಿರ್ಮಾಪಕ ರಮೇಶ್ ರೆಡ್ಡಿ ಮಿತ್ರರನ್ನು ಸಂಪರ್ಕಿಸಿ ಟೈಟಲ್ ಕೇಳಿಕೊಂಡಿದ್ದರು.
‘ಕನ್ನಡ ಪಿಚ್ಚರ್’ ಸಂದರ್ಶನದಲ್ಲಿ ಮಾತನಾಡಿದ ಮಿತ್ರ, “ನಾನು ಈ ಟೈಟಲ್ ಹಣಕ್ಕಾಗಿ ನೀಡಿಲ್ಲ. ಪ್ರೀತಿಯಿಂದ ಬಿಟ್ಟುಕೊಟ್ಟೆ. ಹಣ ಕೊಡಲು ಬಂದರೂ ಬೇಡ ಎಂದೆ. ಆದರೆ ಕನಿಷ್ಠಪಕ್ಷ ಥ್ಯಾಂಕ್ಸ್ ಕಾರ್ಡ್ನಲ್ಲಿ ಹೆಸರು ಹಾಕಬಹುದಿತ್ತು. ಅರ್ಜುನ್ ಜನ್ಯ ಒಮ್ಮೆ ನನೆಪಿಸಿಕೊಳ್ಳಬಹುದು ಎಂದುಕೊಂಡಿದ್ದೆ. ಆದರೆ ಏನೂ ಆಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಕಥೆಗೆ ‘45’ ಟೈಟಲ್ ಅತ್ಯಂತ ಸೂಕ್ತವಾಗಿದ್ದು, ಚಿತ್ರ ವೀಕ್ಷಿಸಿದವರಿಗೆ ಇದರ ಮಹತ್ವ ಸ್ಪಷ್ಟವಾಗುತ್ತದೆ. ಹೀಗಾಗಿ ಈ ಶೀರ್ಷಿಕೆಯನ್ನು ಆಯ್ಕೆ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ.
‘45’ ಸಿನಿಮಾ ಡಿಸೆಂಬರ್ 25ರಂದು ಥಿಯೇಟರ್ಗೆ ಎಂಟ್ರಿ ನೀಡಿ, ಕೆಲ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಜನವರಿ 23ರಿಂದ ಜೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ – ಆದರೆ ಈ ಬಾರಿ ಕಥೆಗೆಲ್ಲ ಅಲ್ಲ, ಟೈಟಲ್ ವಿವಾದಕ್ಕೆ!



