ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡಗೆ ಬೆದರಿಕೆ ಹಾಕಿದ್ದ ಪ್ರಕರಣ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆಯುತ್ತಿದೆ. ಆರೋಪಿಯಾಗಿರುವ ರಾಜೀವ್ ಗೌಡ ಬಂಧನ ಭೀತಿಯಿಂದ ಪರಾರಿಯಾಗಿ ಈಗಾಗಲೇ 10 ದಿನಗಳು ಕಳೆದಿದ್ದು, ಅವರನ್ನು ಬಂಧಿಸಲು ಪೊಲೀಸರು ಭಾರೀ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪೊಲೀಸರು ಹಗಲು–ರಾತ್ರಿ ಶೋಧ ಕಾರ್ಯ ಮುಂದುವರೆಸಿದ್ದು, ಶುಕ್ರವಾರ ರಾತ್ರಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಬೆಂಗಳೂರಿನ ಸಂಜಯ್ ನಗರದಲ್ಲಿರುವ ರಾಜೀವ್ ಗೌಡ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಈ ವೇಳೆ ಕೂಡ ಆರೋಪಿಯ ಸುಳಿವು ಲಭಿಸಿಲ್ಲ.
ಇನ್ನು ರಾಜೀವ್ ಗೌಡ ವಿದೇಶಕ್ಕೆ ಪರಾರಿಯಾಗುವ ಆತಂಕ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ಮೇಲೆ ಕೂಡ ಪೊಲೀಸರು ನಿಗಾ ವಹಿಸಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ತೀವ್ರಗೊಳಿಸಲಾಗಿದೆ. ಈ ನಡುವೆ ಇಂದು ನ್ಯಾಯಾಲಯದಲ್ಲಿ ರಾಜೀವ್ ಗೌಡ ಬೇಲ್ ಅರ್ಜಿ ವಿಚಾರಣೆ ನಡೆಯಲಿದ್ದು, ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಪ್ರಕರಣಕ್ಕೆ ಹೊಸ ತಿರುವು ನೀಡಿರುವ ಮತ್ತೊಂದು ಬೆಳವಣಿಗೆಯಲ್ಲಿ, ಪೌರಾಯುಕ್ತೆ ಅಮೃತಗೌಡ ಮೇಲೆ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿರುವ ಪತ್ರ ನಗರಸಭೆ ಕಚೇರಿಗೆ ಅಂಚೆ ಮೂಲಕ ಬಂದಿದೆ. ಈ ಬಗ್ಗೆ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದು, ನ್ಯಾಯಾಲಯದ ಅನುಮತಿ ಪಡೆದು ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಬೆದರಿಕೆ ಪತ್ರದ ನಂತರ ಹಾಗೂ ಕೆಪಿಸಿಸಿ ವತಿಯಿಂದ ರಾಜೀವ್ ಗೌಡ ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ, ಅಮೃತಗೌಡ ಮೇಲೆ ದಾಳಿ ಸಂಭವಿಸಬಹುದೆಂಬ ಆತಂಕ ತೀವ್ರಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಶಿಡ್ಲಘಟ್ಟ ನಗರಸಭೆ ಕಚೇರಿ ಹಾಗೂ ಪೌರಾಯುಕ್ತೆಯ ನಿವಾಸದ ಸುತ್ತ ಪೊಲೀಸ್ ಗಸ್ತು ಹೆಚ್ಚಿಸಲಾಗಿದ್ದು, ಭದ್ರತೆ ಬಿಗಿಗೊಳಿಸಲಾಗಿದೆ.



