ಬೆಂಗಳೂರು: ಕೆಲಸ ಬಿಟ್ಟು ಹೋಗುವುದಾಗಿ ಹೇಳಿದ್ದಕ್ಕೆ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಡು ರಸ್ತೆಯಲ್ಲೇ ಹಲ್ಲೆ ಮಾಡುವುದಾಗಿ ಹಾಗೂ ಕೊಲೆ ಬೆದರಿಕೆ ಹಾಕಿದ ಸೈಬರ್ ಸೆಂಟರ್ ಮಾಲೀಕನನ್ನು ಕೆಂಗೇರಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಕೆಂಗೇರಿಯಲ್ಲಿರುವ ಮುಸ್ಕಾನ್ ಟೈಮ್ಸ್ ಸೈಬರ್ ಸೆಂಟರ್‌ನ ಮಾಲೀಕ ಸೈಯದ್ ಎಂಬಾತನೇ ಆರೋಪಿಯಾಗಿದ್ದು, ಕಳೆದ ಐದು ವರ್ಷಗಳಿಂದ ಅದೇ ಸೈಬರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಎಂಬ ಯುವತಿಗೆ ಈ ರೀತಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಲಕ್ಷ್ಮಿ ಅವರು ಕಾರಣಾಂತರಗಳಿಂದ ಕೆಲ ದಿನಗಳ ಕಾಲ ರಜೆ ಪಡೆದಿದ್ದರು. ಇದರಿಂದ ಕೋಪಗೊಂಡ ಮಾಲೀಕ ಸೈಯದ್, ಜನವರಿ 22ರಂದು ಸಂಜೆ ಸುಮಾರು 7.30ರ ಸುಮಾರಿಗೆ ನಡು ರಸ್ತೆಯಲ್ಲೇ ಲಕ್ಷ್ಮಿ ಅವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿನ್ನನ್ನು ರೋಡ್‌ನಲ್ಲೇ ಕತ್ತರಿಸಿ ಹಾಕ್ತೀನಿ”, “ಬಟ್ಟೆ ಬಿಚ್ಚಿ ಹೊಡಿತೀನಿ” ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಮಾಲೀಕನ ಅಸಭ್ಯ ವರ್ತನೆ ಗಮನಿಸಿದ ಸ್ಥಳೀಯರು ತಕ್ಷಣ ಪ್ರಶ್ನೆ ಮಾಡಿದ್ದು, ಸರಿಯಾಗಿ ಮಾತನಾಡುವಂತೆ ಎಚ್ಚರಿಸಿದ್ದಾರೆ. ಬಳಿಕ ಸ್ಥಳೀಯರು ಕೆಂಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಆರೋಪಿ ಸೈಯದ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆ ಬಳಿಕ ಸ್ಟೇಷನ್ ಬೆಲ್ ಮೇಲೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



