ಗದಗ: ನಗರದ ವಾರ್ಡ ನಂ. 29 ರ ಹಾತಲಗೇರಿ ನಾಕಾ ಬಳಿ ಇಂದು ಶಂಕರ ಹೇಮರಡ್ಡಿ ಮುದರಡ್ಡಿ ಇವರ ನೇತೃತ್ವದಲ್ಲಿ ಹಾತಲಗೇರಿ ನಾಕಾದಿಂದ ಧನುಷ್ಯ ಹೋಟೆಲ್‌ನ ವರೆಗಿನ 1, 2 ಮತ್ತು 3 ಅಡ್ಡ ರಸ್ತೆಯ ಸಾರ್ವಜನಿಕರು ಇಂದು ದಿಢೀರನೆ ಪ್ರತಿಭಟನೆ ನಡೆಸಿದರು.
ಮೂಲಭೂತ ಸೌಕರ್ಯಗಳಾದ ಒಳಚರಂಡಿ, ಗಟಾರು, ನೀರು ನಿಂತಲ್ಲೇ ನಿಲ್ಲುತ್ತಿದ್ದು, ಸೊಳ್ಳೆಗಾಳ ಕಾಟ, ಇಲ್ಲೇ ಹತ್ತಿರ ಇಂಡಸ್ಟ್ರಿಯಲ್ ಇರುವುದರಿಂದ ಕಾರ್ಖಾನೆಯಿಂದ ಬಿಡುವ ಹೊಗೆ, ಮಕ್ಕಳ, ವೃದ್ಧರ ಆರೋಗ್ಯಕ್ಕೆ ತೊಂದರೆಯಾಗುತ್ತಿದ್ದು, ಈ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಇದರಿಂದ ಭಯಭೀತಗೊಂಡಿದ್ದಾರೆ.
ಕೆ. ಎಲ್. ಜಿ. ಕಾಲೇಜು ಕಂಪೌಂಡ್ ಹತ್ತಿರ ಮಾಂಸದ ಅಂಗಡಿಗಳಾಗಿದ್ದು, ಇದರ ದುರ್ವಾಸನೆ ಮತ್ತು ನಾಯಿಗಳ ಕಾಟದಿಂದ ಮಕ್ಕಳು ಭಯಭೀತರಾಗಿದ್ದಾರೆ.
ಈ ಪ್ರದೇಶದಲ್ಲಿ ಕೆ. ಎಲ್. ಇ. ಸೇರಿದಂದ ಶಾಲಾ ಕಾಲೇಜು ಇದ್ದು, ಇಲ್ಲಿ ರಸ್ತೆ ಸಂಚಾರ ಬಹಳ ದಟ್ಟಣೆಯಾಗಿದ್ದು, ರಸ್ತೆಗಳಲ್ಲಿ ಮಕ್ಕಳು ಶಾಲೆ ಕಾಲೇಜುಗಳಿಗೆ ತೆರಳು ಪರದಾಡುವಂತಾಗಿದೆ. ಹಾತಲಗೇರಿ ಮುಖ್ಯ ರಸ್ತೆಯಿಂದ ಸಾಗುವ ಗಟಾರ ಸಂಪೂರ್ಣವಾಗಿ ಹಾಳಾಗಿದ್ದು, ಅದನ್ನು ದುರಸ್ತಿಗೊಳಿಸಬೇಕೆಂದು ಹೀಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಹಲವಾರು ಬಾರಿ ನಗರಸಭೆ ಪೌರಾಯುಕ್ತರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ನಗರಸಭೆ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದು ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಹಾತಲಗೇರಿ ನಾಕಾದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ತಕ್ಷಣವೇ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಕೂಡಲೇ ತಮ್ಮ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಹೇಳಿದರು.
ಶಂಕರ ಹೇಮರಡ್ಡಿ ಮುದರಡ್ಡಿಯವರು ಮಾತನಾಡಿ ಈ ಎಲ್ಲ ಸಮಸ್ಯೆಗಳನ್ನು ಒಂದು ವಾರದೊಳಗೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಆರ್. ಎಸ್. ಪೂಜಾರ, ಬಿ. ಟಿ. ಪಾಟೀಲ, ಮಹಮ್ಮದ ನದಾಫ, ಎಸ್. ಸಿ. ಅಂಗಡಿ, ಪ್ರಕಾಶ ಹಬೀಬ, ಎ. ಸಿ. ಸಿಂಧೂರ, ಮಂಜುನಾಥ ಕಬಾಡಿ ಸೇರಿದಂತೆ ಗುರುಹಿರಿಯರು, ಸಾರ್ವಜನಿಕರು, ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.



