ವಿಜಯಸಾಕ್ಷಿ ಸುದ್ದಿ, ಗದಗ: ಉದ್ಯೋಗಿಗಳ ಹಾಗೂ ಅಧಿಕಾರಿಗಳ 9 ಸಂಘಟನೆಗಳನ್ನು ಒಳಗೊಂಡಿರುವ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ. 27ರಂದು ದೇಶದಾದ್ಯಂತ ಬ್ಯಾಂಕ್ ನೌಕರರ ಮುಷ್ಕರವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ ಮುಷ್ಕರದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕುಗಳು, ವಿದೇಶಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳ ನೌಕರರು ಪಾಲ್ಗೊಳ್ಳಲಿದ್ದಾರೆ.
ಬ್ಯಾಂಕ್ ನೌಕರರ ಬೇಡಿಕೆಗಳಾದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರಕ್ಕೆ 5 ದಿನಗಳ ಕೆಲಸ ವ್ಯವಸ್ಥೆ ಜಾರಿಗೆ ತರಲು ಸರ್ಕಾರದ ಅನುಮೋದನೆ ನೀಡಬೇಕು, ಪ್ರಸ್ತುತ ಬ್ಯಾಂಕುಗಳಿಗೆ ರಜೆ ಆಗಿರುವ 2ನೇ ಮತ್ತು 4ನೇ ಶನಿವಾರಗಳ ಹೊರತಾಗಿ ಉಳಿದ ಎಲ್ಲಾ ಶನಿವಾರಗಳನ್ನು ರಜೆ ಎಂದು ಘೋಷಿಸಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿ ನಡೆಸಲಿದ್ದಾರೆ.
ಬ್ಯಾಂಕುಗಳಲ್ಲಿ ಈಗಾಗಲೇ 2ನೇ ಮತ್ತು 4ನೇ ಶನಿವಾರಗಳು ರಜೆಯಾಗಿರುವುದರಿಂದ, ಸೋಮವಾರದಿಂದ ಶುಕ್ರವಾರದವರೆಗೆ ಕೆಲಸದ ಸಮಯವನ್ನು ಹೆಚ್ಚಿಸಿ ಉಳಿದ ಶನಿವಾರಗಳನ್ನು ರಜೆ ಎಂದು ಘೋಷಿಸುವುದರಿಂದ ವಿವಿಧ ಪರ್ಯಾಯ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುವ ಇಂದಿನ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ಯಾವುದೇ ದೊಡ್ಡ ಸಮಸ್ಯೆಯಾಗುವುದಿಲ್ಲ. ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳು ತಮಗೆ ಮಾತ್ರ ಅನ್ಯಾಯವಾಗುತ್ತಿರುವುದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಪಿಎಂಸಿ ಪ್ರಾದೇಶಿಕ ಕಚೇರಿಯ ಮುಂದೆ ಮತ ಪ್ರದರ್ಶನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ಈ ಮತ ಪ್ರದರ್ಶನದಲ್ಲಿ ಹನುಮೇಶ್ ಎಂ.ಗಂಗರಾಹುತರ, ಅಮರೇಶ್ವರ, ಶಿವಾನಂದ್, ಪ್ರೇಮ್ ಕುಮಾರ, ಸೂರ್ಯಪ್ರಕಾಶ್, ದೀಪ ಮಾಲಾ, ನೇಹಾ, ಸುಧಾರಾಣಿ, ಪ್ರೀತಿ, ಲೋಕೇಶ್, ಹರೀಶ, ದೀಪಕ, ವಿನೋದ, ವಿಜಯ, ಸಿದ್ದಲಿಂಗೇಶ, ರಾಜು ಸಿಂಗಾಡಿ ಮುಂತಾದವರು ಪಾಲ್ಗೊಂಡಿದ್ದರು.
ಹಣಕಾಸು ಕ್ಷೇತ್ರದಲ್ಲಿ ಈಗಾಗಲೇ ಆರ್.ಬಿ.ಐ, ಎಲ್.ಐ.ಸಿ ಮತ್ತು ಜಿ.ಐ.ಸಿಗಳಲ್ಲಿ ವಾರಕ್ಕೆ 5 ದಿನಗಳ ಕೆಲಸ ವ್ಯವಸ್ಥೆ ಜಾರಿಗೆ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಕಚೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಷೇರುಪೇಟೆಗಳು ಸಹ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಹಣ ಮಾರುಕಟ್ಟೆ ವಿದೇಶಿ ವಿನಿಮಯ ವ್ಯವಹಾರಗಳು ಶನಿವಾರ ಹಾಗೂ ಭಾನುವಾರ ಮುಚ್ಚಿರುತ್ತವೆ ಎಂದು ಯೂನಿಯನ್ ಮುಖ್ಯಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.



