ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತರಿಗೆ, ಜನ-ಜಾನುವಾರುಗಳಿಗೆ ನೀರು ಪೂರೈಸುವ ಪಟ್ಟಣದ ಇಟ್ಟಿಗೆರೆ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆ ಶನಿವಾರ ಸ್ಥಳಕ್ಕೆ ಶಾಸಕ ಡಾ.ಚಂದ್ರು ಲಮಾಣಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕೆರೆಯ ಅಳತೆ ಮತ್ತು ಅಲ್ಲಿ ನಡೆದಿರುವ ಕಾಮಗಾರಿಯಿಂದ ಆಗುವ ಸಮಸ್ಯೆ ಮತ್ತು ಅನುಕೂಲತೆಗಳನ್ನು ಕುರಿತು ಅಲ್ಲಿನ ನಿವಾಸಿಗಳು, ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಕೆರೆಯ ಸುತ್ತಲಿನ ಪ್ರದೇಶವನ್ನು ವೀಕ್ಷಿಸಿದ ಅವರು, ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಮಣ್ಣಿನ ಬಂಡು ಹಾಕಿರುವುದನ್ನು ಗಮನಿಸಿ, ಅದರ ಹಿಂದಿನ ಪ್ರದೇಶವು ಮತ್ತೆ ತಗ್ಗು ಪ್ರದೇಶವಾಗುವದರಿಂದ ನೀರು ನಿಲ್ಲುವ ಅಪಾಯ ತಪ್ಪಿದ್ದಲ್ಲ. ಇದರ ಬಗ್ಗೆ ಯಾರೂ ಗಮನ ಹರಿಸದಿರುವದು ವಿಷಾದನೀಯ. ಅಲ್ಲದೆ ಮೇಲಿನಿಂದ ಹರಿದು ಬರುವ ನೀರು ಹೊರಹೋಗುವ ಮಾರ್ಗವೂ ಇಲ್ಲದಿರುವುದು, ರಾಜಕಾಲುವೆ ನಿರ್ಮಾಣ ಮಾಡುವ ಬಗ್ಗೆ ಸರಿಯಾದ ನಿರ್ದೇಶನ ಇಲ್ಲದಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಮಣ್ಣಿನ ಬಂಡು ಹಾಕಿರುವ ಹಿಂದಿನ ಪ್ರದೇಶಕ್ಕೆ ಅಲ್ಲಿನ ನಿವಾಸಿಗಳು ಇಡಿ ಪ್ರದೇಶವನ್ನು ಅಷ್ಟೇ ಎತ್ತರದ ಮಣ್ಣಿನಿಂದ ತುಂಬಿಕೊಳ್ಳುವದು ಸಾಧ್ಯವೇ ಎಂದು ಪ್ರಶ್ನಿಸಿದರು.
ಈ ವೇಳೆ ಕೆಲವರು ಒಂದೆರಡು ಮನೆಗಳನ್ನು ಉಳಿಸುವ ನಿಟ್ಟಿನಲ್ಲಿ ಇಡೀ ಕೆರೆಯನ್ನು ಬಲಿ ಕೊಡಬಾರದು ಎಂದು ಒತ್ತಾಯಿಸಿದರು. ಮೇಲಿನಿಂದ ಬರುವ ನೀರು ಹರಿದು ಹೋಗಲು ಕಾಲುವೆ ನಿರ್ಮಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ. ಕೆರೆಯ ಜಾಗೆಯು ಯಾವುದೇ ರೀತಿಯಿಂದಲೂ ಅತಿಕ್ರಮಣವಾಗಿಲ್ಲ. ಇಲ್ಲಿ ವಾಸಿಸುವ ಎಲ್ಲರ ನಿವೇಶನಗಳು ಸಹ ಕಾನೂನು ಪ್ರಕಾರ ಮಾಲ್ಕಿಯದ್ದಾಗಿವೆ. ಸುತ್ತಮುತ್ತಲಿನ ನಿವೇಶನಗಳಿಗೆ ಅನುಕೂಲವಾಗುವಂತೆ ಸುಮಾರು 3 ಎಕರೆ ಪ್ರದೇಶದಷ್ಟು ಜಾಗೆಯಲ್ಲಿ ಮಣ್ಣು ಹಾಕಿ ರಸ್ತೆ ಮಾಡಲಾಗಿದ್ದು, ಅದನ್ನು ತೆಗೆದರೆ ನೀರು ತುಂಬಿ ಕೋಡಿ ಹರಿಯುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಹಿಂದೆ ನೀರು ತುಂಬಿಕೊಂಡಾಗ ಇಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆ, ನೋವು ಅನುಭವಿಸಿದ್ದೇವೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ, ಕೆರೆಯ ಅಳತೆಯ ಪ್ರಕಾರ ಅತಿಕ್ರಮಣವಾಗಿರುವ ಜಾಗೆಯನ್ನು ತೆರವುಗೊಳಿಸಿದರೆ ಇಲ್ಲಿನ ನಿವಾಸಿಗಳ ತೊಂದರೆ ತಪ್ಪಿಸಬಹುದಾಗಿದೆ ಎಂದು ಶಂಕರ ಬ್ಯಾಡಗಿ ಹೇಳಿದರು.
ಈ ವೇಳೆ ಉಪವಿಭಾಗಾಧಿಕಾರಿ ಎ.ಸಿ. ಗಂಗಪ್ಪ, ತಹಸೀಲ್ದಾರ ಧನಂಜಯ ಎಂ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಆರೋಗ್ಯ ನೀರೀಕ್ಷಕ ಮಂಜುನಾಥ ಮುದಗಲ್ ಮುಂತಾದವರಿದ್ದರು.
ನಂತರ ಪುರಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು, ಈ ಕುರಿತು ಅಧಿಕಾರಿಗಳು ಸಮಗ್ರವಾಗಿ ಪರಿಶೀಲನೆ ನಡೆಸಿ ಕಾಮಗಾರಿಯನ್ನು ಮುಂದುವರೆಸಬೇಕು. ಇಲ್ಲಿಯವರೆಗೂ ನಡೆದ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿ, ಆಗಿರುವ ಕಾಮಗಾರಿಯ ಬಗ್ಗೆ ಇರುವ ದೂರುಗಳನ್ನು ಪರಿಶೀಲಿಸಬೇಕು ಮತ್ತು ಕೆರೆಯ ಅಳತೆಯ ಬಗ್ಗೆಯೂ ಇರುವ ದೂರುಗಳನ್ನು ಸರಿಯಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಇದು ಈ ಭಾಗದ ದೊಡ್ಡ ಮತ್ತು ಹಳೆಯ ಕೆರೆಯಾಗಿದ್ದು, ಅದನ್ನು ಅಭಿವೃದ್ಧಿಪಡಿಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.



