ರಥಸಪ್ತಮಿಯು ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ಹಾಗೂ ಮಂಗಳಕರ ಪರ್ವ ಕಾಲಗಳಲ್ಲಿ ಒಂದಾಗಿದೆ.
ಜಗದ ಚಕ್ಷು ಹಾಗೂ ಬ್ರಹ್ಮಾಂಡದ ಶಕ್ತಿಯ ಮೂಲವಾದ ಸೂರ್ಯ ಭಗವಾನರ ಜನ್ಮದಿನವೆಂದು ಆಚರಿಸಲಾಗುತ್ತದೆ. ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ದಿನದಂದು ಈ ಪರ್ವ ನಡೆಯುತ್ತಿದ್ದು, ಈ ದಿನ ಸೂರ್ಯನ ವಿಶೇಷ ಲಹರಿಗಳು ಇಡೀ ಬ್ರಹ್ಮಾಂಡದ ಮೇಲೆ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ.
2026ರಲ್ಲಿ ರಥಸಪ್ತಮಿ ಜನವರಿ 25ರ ಭಾನುವಾರವಾಗಿದ್ದು, ಸಪ್ತಮಿ ತಿಥಿ ಬೆಳಗ್ಗೆ 12:39ರಿಂದ ರಾತ್ರಿ 11:10ರವರೆಗೆ ಇರುತ್ತದೆ. ಈ ದಿನ ಬೆಳಗಿನ ಜಾವ ಏಳು ಎಕ್ಕದ ಎಲೆಗಳನ್ನು ತಲೆ, ಭುಜ, ಮೊಣಕಾಲು ಹಾಗೂ ಪಾದಗಳ ಮೇಲೆ ಇಟ್ಟುಕೊಂಡು ಪೂರ್ವಾಭಿಮುಖವಾಗಿ ಸೂರ್ಯನನ್ನು ಸ್ಮರಿಸುತ್ತಾ ಸ್ನಾನ ಮಾಡುವ ಪದ್ಧತಿ ಇದೆ. ಇದರಿಂದ ಆಯುರಾರೋಗ್ಯ, ಐಶ್ವರ್ಯ, ಪ್ರಜ್ಞಾವರ್ಧನೆ ಆಗುವುದರ ಜೊತೆಗೆ ಮಾಟಮಂತ್ರ ಹಾಗೂ ದುಷ್ಟಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ ಎಂದು ನಂಬಲಾಗಿದೆ.
ಸೂರ್ಯನಿಗೆ ಎಕ್ಕದ ಎಲೆಗಳು ಅತ್ಯಂತ ಪ್ರಿಯವಾದುದರಿಂದ ಈ ಸ್ನಾನವು ಜನ್ಮಪಾಪಗಳನ್ನು ನಿವಾರಿಸಿ ಮನಸ್ಸನ್ನು ಶುದ್ಧಗೊಳಿಸಿ ಜೀವನದಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಇದೇ ವೇಳೆ ರಥಸಪ್ತಮಿ ದಿನ ಸೂರ್ಯನ ಚೈತನ್ಯಶಕ್ತಿ ಸಪ್ತ ನದಿಗಳಲ್ಲಿ ವಿಶೇಷವಾಗಿ ಪ್ರವಹಿಸುವುದರಿಂದ ನದಿಸ್ನಾನಕ್ಕೆ ಹೆಚ್ಚಿನ ಮಹತ್ವವಿದ್ದು, ಶ್ರೀರಂಗಪಟ್ಟಣ, ಹೇಮಗಿರಿ, ಶಿಕಾರಿಪುರ, ಇಡಗುಂಜಿ, ಕೊಪ್ಪಳ ಮುಂತಾದ ಪವಿತ್ರ ಸ್ಥಳಗಳಲ್ಲಿ ಸ್ನಾನ ಹಾಗೂ ಬ್ರಹ್ಮರಥೋತ್ಸವಗಳು ಭಕ್ತಿಯಿಂದ ಆಚರಿಸಲಾಗುತ್ತವೆ.



