ಬೆಂಗಳೂರು: ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಅಜಾಗರೂಕವಾಗಿ ಚಾಲನೆ ಮಾಡಿದುದು ಹಾಗೂ ನಿಗದಿತ ಡೆಸಿಬಲ್ ಮಿತಿಗಿಂತ ಹೆಚ್ಚು ಶಬ್ದ ಹೊರಸೂಸುವ ಸೈಲೆನ್ಸರ್ ಅಳವಡಿಸಿದ್ದ ಆರೋಪ ಸಂಬಂಧ ದಾಖಲಾದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದ್ದು, ಅರ್ಜಿದಾರರು ಸಮುದಾಯ ಸೇವೆಗೆ ಸಿದ್ಧರಾಗುವಂತೆ ಸೂಚಿಸಿದೆ. ಈ ಸಂಬಂಧ ಬೆಂಗಳೂರು ಸಿ.ವಿ.ರಾಮನ್ ನಗರದ ನಿವಾಸಿ ಬಿ.ಆರ್. ಚಿರಂತನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ಶಬ್ದ ಮಾಲಿನ್ಯಕ್ಕೆ ಕಾರಣವಾಗಿದ್ದ ಸೈಲೆನ್ಸರ್ ಅನ್ನು ಈಗಾಗಲೇ ಬದಲಾಯಿಸಿದ್ದು, ಶಬ್ದ ಮಾಲಿನ್ಯ ಮತ್ತು ವೇಗ ಚಾಲನೆಗೆ ಸಂಬಂಧಿಸಿದ ದಂಡವನ್ನೂ ಪಾವತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಮುಂದಿನ ವಿಚಾರಣೆಯವರೆಗೆ ತಡೆ ನೀಡಲಾಗಿದೆ. ಸಮುದಾಯ ಸೇವೆಗೆ ಸಂಬಂಧಿಸಿದಂತೆ ಪ್ರಕರಣದ ಅಂತಿಮ ಇತ್ಯರ್ಥದ ವೇಳೆ ಸೂಕ್ತ ಆದೇಶ ನೀಡಲಾಗುವುದು ಎಂದು ಪೀಠ ತಿಳಿಸಿದೆ. ಜೊತೆಗೆ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಲಾಗಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 2025ರ ಡಿಸೆಂಬರ್ 14ರಂದು ಮಡಿಕೇರಿಯಲ್ಲಿ ಲ್ಯಾಂಬೋರ್ಗಿನಿ ಶೋರೂಂ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ 13 ಲ್ಯಾಂಬೋರ್ಗಿನಿ ಕಾರುಗಳು ತೆರಳುತ್ತಿದ್ದವು. ಈ ಸಂದರ್ಭ ಬೆಂಗಳೂರು–ಮೈಸೂರು ರಸ್ತೆಯ ರಾಜರಾಜೇಶ್ವರ ನಗರ ಸಮೀಪ ವೇಗ ಚಾಲನೆಯ ಆರೋಪ ಸಂಬಂಧ ಎಕ್ಸ್‌ನಲ್ಲಿ ವಿಡಿಯೋ ವೈರಲ್ ಆಗಿತ್ತು. ಆದರೆ ಆ ವಾಹನಗಳ ಪೈಕಿ ಅರ್ಜಿದಾರರ ಕಾರು ಕೊನೆಯದಾಗಿತ್ತು. ಸಾರ್ವಜನಿಕರೊಬ್ಬರು ಸೆರೆಹಿಡಿದ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಇದಲ್ಲದೆ, ಬೆಂಗಳೂರು ಸಂಚಾರ ದಟ್ಟಣೆಯಲ್ಲಿ ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ವಾಹನ ಚಾಲನೆ ಮಾಡುವುದು ಅಸಾಧ್ಯ. ವಿಡಿಯೋ ವೈರಲ್ ಆದ ಸುಮಾರು ಒಂದೂವರೆ ತಿಂಗಳ ಬಳಿಕ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವಕೀಲರು ವಾದಿಸಿದರು.
ಈ ನಡುವೆ ಅರ್ಜಿದಾರರು ಶಬ್ದ ಮಾಲಿನ್ಯ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿ 8,500 ರೂ. ದಂಡ ಪಾವತಿಸಿ, ಸೈಲೆನ್ಸರ್ ಬದಲಿಸಿದ್ದಾರೆ. ವೇಗ ಚಾಲನೆಗೆ ಗರಿಷ್ಠ 1,000 ರೂ. ದಂಡ ವಿಧಿಸುವುದಷ್ಟೇ ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ಹೇಳಿದರು. ಲ್ಯಾಂಬೋರ್ಗಿನಿ ಕಾರು ಎಂಬ ಕಾರಣಕ್ಕೆ ಮಾತ್ರ ಪ್ರಕರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂಬ ವಾದವನ್ನೂ ಮಂಡಿಸಿದರು.
ವಿಚಾರಣೆ ವೇಳೆ ನ್ಯಾಯಮೂರ್ತಿಗಳು, “ರಾಜರಾಜೇಶ್ವರಿ ನಗರದ ಟ್ರಾಫಿಕ್ ಸ್ಥಿತಿಯಲ್ಲಿ ವೇಗವಾಗಿ ಕಾರು ಚಾಲನೆ ಮಾಡುವುದು ಹೇಗೆ ಸಾಧ್ಯ?” ಎಂದು ಪ್ರಾಸಿಕ್ಯೂಷನ್‌ಗೆ ಪ್ರಶ್ನಿಸಿದರು. ಇದಕ್ಕೆ ಸರ್ಕಾರಿ ವಕೀಲರು ವಿಡಿಯೋವನ್ನು ಪೀಠಕ್ಕೆ ಪ್ರದರ್ಶಿಸಿದರು.
ಅಲ್ಲದೆ, ಅರ್ಜಿದಾರರ ಲ್ಯಾಂಬೋರ್ಗಿನಿ ಕಾರು ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದ್ದು, ಹೊರ ರಾಜ್ಯ ನೋಂದಣಿ ಹಿನ್ನೆಲೆಯಲ್ಲಿ 2025ರ ಸೆಪ್ಟೆಂಬರ್‌ನಲ್ಲಿ 1.05 ಕೋಟಿ ರೂ. ಮೋಟಾರು ವಾಹನ ತೆರಿಗೆ ಪಾವತಿಸಲಾಗಿದೆ ಎಂದು ಸರ್ಕಾರಿ ವಕೀಲರು ತಿಳಿಸಿದರು.



