ಬೆಂಗಳೂರು: ರಾಜೀವ್ ಗೌಡ ಬಂಧನಕ್ಕೆ ಮೊದಲ ದಿನವೇ ಆದೇಶ ನೀಡಲಾಗಿತ್ತು. ಆದರೆ ಬಂಧಿಸುವಷ್ಟರಲ್ಲಿ ಅವರು ತಪ್ಪಿಸಿಕೊಂಡು ಹೋಗಿದ್ದಾರೆ. ಎಷ್ಟು ದಿನ ಅಡಗಿ ಕುಳಿತರೂ ಖಂಡಿತವಾಗಿಯೂ ಅವರನ್ನು ಹಿಡಿಯುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜೀವ್ ಗೌಡನನ್ನು ತಕ್ಷಣ ಬಂಧಿಸಲಾಗುವುದು, ಯಾವುದೇ ಮುಲಾಜಿಲ್ಲ, ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಖಡಕ್ ಸಂದೇಶ ನೀಡಿದ್ದಾರೆ. ಇದೇ ವೇಳೆ ಬೆಳಗಾವಿಯಲ್ಲಿ ನಡೆದ 400 ಕೋಟಿ ರೂ. ರಾಬರಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಮಹಾರಾಷ್ಟ್ರ ಪೊಲೀಸರು ತನಿಖೆಗೆ ಸಹಕಾರ ಕೋರಿ ನಮ್ಮ ಪೊಲೀಸರಿಗೆ ಪತ್ರ ಬರೆದಿದ್ದಾರೆ. ತನಿಖೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಹೆಚ್ಚಿನ ಮಾಹಿತಿ ಸಿಕ್ಕ ಬಳಿಕ ರಾಜ್ಯ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಗಣರಾಜ್ಯೋತ್ಸವದ ವೇಳೆ ರಾಜ್ಯಪಾಲರು ಭಾಷಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಇಂದು ಸಂಜೆಯೊಳಗೆ ಸ್ಪಷ್ಟತೆ ಸಿಗಲಿದೆ, ಭಾಷಣದ ಪ್ರತಿಯನ್ನು ನಾನು ಇನ್ನೂ ನೋಡಿಲ್ಲ, ರಾಜ್ಯಪಾಲರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದು ತಿಳಿಯಲಿದೆ ಎಂದು ಹೇಳಿದರು.



